ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಸೇವಾ ಸಹಕಾರ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 24ರಂದು ಸಂಘದ ಅಕ್ಷಯಧಾಮ ಸಭಾ ಭವನದಲ್ಲಿ ಆಡಳಿತಾಧಿಕಾರಿಯಾದ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕರಾದ ಎನ್. ಜೆ. ಗೋಪಾಲ್ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದಲ್ಲಿ 16.15 ಕೋಟಿ ರೂಪಾಯಿ ಠೇವಣಿ ಹೊಂದಿದ್ದು, 7.18 ಕೋಟಿ ರೂಪಾಯಿ ಸಾಲ ಪ್ರಸಕ್ತ ಮಾರ್ಚ್ ಅಂತ್ಯದವರೆಗೆ ಇದೆ. 1434 ಎ ತರಗತಿ ಸದಸ್ಯ ಬಲವಿದ್ದು, 26.75 ಲಕ್ಷ ಪಾಲು ಬಂಡವಾಳ ಹೊಂದಿದೆ. ಸಂಘವು ಈ ಬಾರಿ 12.70 ಲಕ್ಷ ರೂ. ನಿವ್ವಳ ಲಾಭ ಪಡೆದುಕೊಂಡಿದೆ. ಪ್ರಸಕ್ತ ವರ್ಷ ಶೇ 8 ಲಾಭಾಂಶವನ್ನು ಸದಸ್ಯರಿಗೆ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಯಿತು.
ಕಲ್ಲಬೆಟ್ಟು ಸಂಘದಿಂದ ಶಿರ್ತಾಡಿ ಪ್ರಾಥಮಿಕ ಸಹಕಾರಿ ಸಂಘ ವಿಭಜನೆಯಾಗುವಾಗ ಹೆಚ್ಚುವರಿಯಾಗಿ 1.28 ಕೋಟಿ ರೂಪಾಯಿ ನೀಡಲಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ದಾಖಲಿಸಲಾಗಿದೆ ಎಂದು ಆಡಳಿತಾಧಿಕಾರಿಯವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಮರು ವಸುಲಾತಿಗೆ ಆದೇಶಿಸಲು ಇಲಾಖೆಗೆ ಬರೆದಿರುವುದನ್ನು ಕೂಡ ತಿಳಿಸಿದರು. ಮಾಜಿ ಅಧ್ಯಕ್ಷರಾದ ಕೆ. ಕೃಷ್ಣರಾಜ್ ಹೆಗ್ಡೆ, ಸುರೇಶ್ ಕೋಟ್ಯಾನ್, ಮಾಜಿ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಸೇರಿದಂತೆ ಸದಸ್ಯರುಗಳು ಬಡ್ಡಿ ಸಹಿತ ವಸೂಲಾತಿಗೆ ತುರ್ತು ಕ್ರಮ ವಹಿಸಲು ಆಡಳಿತವನ್ನು ಒತ್ತಾಯಿಸಿದರು. ಸಂಘ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಿಗದಿತ ಬಜೆಟ್ ಗಿಂತ ಹೆಚ್ಚುವರಿಯಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿರುವುದಕ್ಕೆ ಸದಸ್ಯರು ಆಕ್ಷೇಪಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನಿತಾ ಆರ್. ಶೆಟ್ಟಿ ವರದಿ ಮಂಡಿಸಿ ಕಾರ್ಯಕಲಾಪ ನಡೆಸಿದರು. ಸಿಬ್ಬಂದಿ ಮೋಹನ್ ನಾಯ್ಕ ನಿರೂಪಿಸಿ, ಪ್ರಣಾಮ್ ಧನ್ಯವಾದವಿತ್ತರು.
