ಕಾರ್ಕಳ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟಕ್ಕೂ ಪರಿಚಯಿಸುವ ಉದ್ದೇಶದಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಕೋಣಗಳ ಆಯ್ಕೆ ಪ್ರಕ್ರಿಯೆ ಮಿಯಾರ್ ಕಂಬಳದಲ್ಲಿ ನಡೆಯುತ್ತಿದ್ದು, ಆಯ್ಕೆಯಲ್ಲಿ ವೇಗ, ಪಾರದರ್ಶಕತೆ ಮತ್ತು ನಿಖರತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಕಾರ್ಕಳದ ಮಿಯ್ಯಾರು ಕಂಬಳ ಕ್ರೀಡಾಂಗಣದಲ್ಲಿ ನಡೆದ ಜೂನಿಯರ್ ಕೋಣಗಳ ಆಯ್ಕೆ ಶಿಬಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಿಯ್ಯಾರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ 180 ಜೋಡಿ ಕೋಣಗಳು ಭಾಗವಹಿಸಿದ್ದು, ಒಟ್ಟು ಆರು ವಿಭಾಗಗಳಲ್ಲಿ 160 ಜೋಡಿ ಕೋಣಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನಾಲ್ಕು ವಿಭಾಗಗಳಲ್ಲಿ 82 ಜೋಡಿ ಕೋಣಗಳ ಆಯ್ಕೆ ಪೂರ್ಣಗೊಂಡಿದ್ದು, ಉಳಿದ ಎರಡು ವಿಭಾಗಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿ ದೆ ಎಂದು ತಿಳಿಸಿದರು.
ಮೈಸೂರು ದಸರಾ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳ ತಂಡ ಅ. 17ರಂದು ಬೆಳಗ್ಗೆ 8 ಗಂಟೆಗೆ ಪುತ್ತೂರಿನಿಂದ ಮೆರವಣಿಗೆಯ ಮೂಲಕ ಪ್ರಯಾಣ ಆರಂಭಿಸಲಿದೆ. ಮಧ್ಯಾಹ್ನ 12 ಗಂಟೆಗೆ ಕುಶಾಲನಗರ ತಲುಪಲಿದ್ದು, ಮಾರ್ಗಮಧ್ಯೆ ಸಂಪಾಜೆ, ಸುಳ್ಯ ಸೇರಿದಂತೆ ವಿವಿಧೆಡೆ ಸ್ವಾಗತಕ್ಕೆ ರೈತಾಪಿ ವರ್ಗದವರು ಸಿದ್ಧತೆ ನಡೆಸುತ್ತಿದ್ದಾರೆ. ಕುಶಾಲನಗರದಿಂದ ಸಂಜೆ 3 ಗಂಟೆಗೆ ಹೊರಟು, ಸಂಜೆ 6.30ರ ಸುಮಾರಿಗೆ ಮೈಸೂರು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಂಬಳವು ಜಾತಿ, ಮತ ಹಾಗೂ ಪಕ್ಷಭೇದವಿಲ್ಲದೆ ನಡೆಯುವ ಕ್ರೀಡೆಯಾಗಿದೆ. ಇದು ತುಳುನಾಡಿನ ಸಮಸ್ತ ಜನರ ನೆಚ್ಚಿನ ಕ್ರೀಡೆಯಾಗಿದ್ದು, ಬೇರೆ ಜಿಲ್ಲೆಗಳಲ್ಲಿ ಆಯೋಜಿಸುವುದರಿಂದ ಅದರ ಸಾಂಸ್ಕೃತಿಕ ಮಹತ್ವ ಕಡಿಮೆಯಾಗುವುದಿಲ್ಲ ಎಂದರು.
ತುಳುನಾಡು ಮತ್ತು ಮೈಸೂರಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿ ಮೈಸೂರು ಕಂಬಳ ಆಯೋಜನೆಗೆ ವಿರೋಧ ಸರಿಯಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿರು.
ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳಾದ ವಿಜಯಕುಮಾರ್ ಕಂಗಿನಮನೆ, ಉದಯ ಎಸ್. ಕೋಟ್ಯಾನ್, ಮುಚ್ಚೂರು ಕಲ್ಕುಡೆ ಲೋಕೇಶ ಶೆಟ್ಟಿ, ಎಡ್ತೂರು ರಾಜೇಶ್ ಶೆಟ್ಟಿ, ಅಂಥೋನಿ ಡಿಸೋಜಾ ನಕ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
