ಶಿಕ್ಷಣ ಸಂಸ್ಥೆಗಳ ವ್ಯಾಪಾರಿ ಮನೋಭಾವದಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಆತಂಕ ವ್ಯಕ್ತಪಡಿಸಿದರು.
ಜನರಲ್ಲೀಗ ಆಂಗ್ಲಮಾಧ್ಯಮದ ಮೇಲಿನ ವ್ಯಾಮೋಹ ಹೆಚ್ಚಿಸಲಾಗಿದೆ. ಕನ್ನಡ ಕನ್ನಡ ಎಂದು ಬೊಬ್ಬಿಡುವ ರಾಜಕಾರಣಿಗಳು, ಅಧಿಕಾರಿಗಳು ಕೂಡಾ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೇ ಕಳುಹಿಸುತ್ತಿದ್ದಾರೆ. ಮೂಡುಬಿದಿರೆ ತಾಲೂಕಿನ ನೀರುಡೆ ಹಾಗೂ ತಾಕೋಡೆಯ ಅನುದಾನಿತ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ಈಗಾಗಲೇ ಮುಚ್ಚಲಾಗಿದೆ. ಶಿರ್ತಾಡಿ, ಕಲ್ಲಮುಂಡ್ಕೂರು ಹಾಗೂ ಬೆಳುವಾಯಿ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನೆದುರಿಸುತ್ತಿದೆ. ಎಂಬುದಾಗಿ ಅವರು ಆತಂಕ ವ್ಯಕ್ತಪಡಿಸಿದರು.
ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಜನರ ಸಹಕಾರ ಅಗತ್ಯವಿದೆ ಎಂದರು. 1966 ರಲ್ಲಿ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡ ಎರಡನೇ ಪ್ರೌಢಶಾಲೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುತ್ತಿದೆ. ಡಿಸೆಂಬರ್ ಮೂರರಂದು ಈ ಶಾಲೆಯ ವಾರ್ಷಿಕೋತ್ಸವ ನಡೆಯಲಿದೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರ ಸಹಪಾಠಿ,ಉದ್ಯಮಿ ನಝೀರ್ ಹುಸೈನ್ ಉಪಸ್ಥಿತರಿದ್ದರು.