ಮೂಡುಬಿದಿರೆ: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ಬಳಿ ಮಂಗಳೂರಿನ ಶ್ರೀಮಾ ನಿಧಿ (ರಿ.) ಸಂಸ್ಥೆಯ ಸುವರ್ಣ ಸ್ಕ್ವೇರ್ ಬಹು ಮಹಡಿಯ ಶಾಪಿಂಗ್ ಮಾಲ್ ಇದರ ಉದ್ಘಾಟನೆ ಶುಕ್ರವಾರ ಮಾಲ್ ಸಭಾಂಗಣದಲ್ಲಿ ಜರಗಿತು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರಿನ ಬಾಲಕೃಷ್ಣ ಸುವರ್ಣ ಅವರ ಮಕ್ಕಳಾದ ಜೇಂಕಾರ್ ಕೃಷ್ಣ ಹಾಗೂ ಯುವಿಕಾ ಶ್ರೀಮಾ ದೀಪ ಪ್ರಜ್ವಲನಗೊಳಿಸಿ ನೂತನ ಮಾಲ್ ಸಂಕೀರ್ಣವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶುಭಾಶಂಸನೆಗೈದ ಆಲಂಗಾರು ಶ್ರೀ ಈಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಅವರು ಯೋಗ ಮತ್ತು ಯೋಗ್ಯತೆ ಇದ್ದಾಗ ಮಾತ್ರ ಸಲ್ಲಬೇಕಾದದ್ದು ಸಲ್ಲಬೇಕಾದರಿಗೇ ಸಲ್ಲುತ್ತದೆ. ಬಾಲಕೃಷ್ಣ ಸುವರ್ಣ ಈ ಸುವರ್ಣಾವಕಾಶ ತಮ್ಮದಾಗಿಸಿಕೊಂಡಿದ್ದಾರೆ ಎಂದರು.
ಮಂಗಳೂರು ಮೂಲದ ಮಲೇಶಿಯಾದ ಉದ್ಯಮಿ ಬಿಪಿನ್ ರೈ, ಬೆಳೆಯುತ್ತಿರುವ ಮೂಡುಬಿದಿರೆಗೆ ಸುಸಜ್ಜಿತ ಮಾಲ್ ಗರಿ ಮೂಡಿಸಿದೆ. ಇಲ್ಲಿ ಮಿನಿ ಥಿಯೇಟರ್ , ಸ್ಟಾರ್ ಹೋಟೆಲ್, ಹಾಲ್ ರೂಪಿಸುವ ಯೋಜನೆಗಳು ಶೀಘ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಏಸ ಖ್ಯಾತಿಯ ತುಳು ಸಿನಿಮಾ ನಿರ್ದೇಶಕ ಉದಯ್ ಶೆಟ್ಟಿ ಕಾಂತಾವರ ಮಾತನಾಡಿ ಸುಸಜ್ಜಿತ ಮಾಲ್ ಉದ್ಘಾಟನೆಯನ್ನು ಅತ್ಯಂತ ಸರಳತೆಯಿಂದ ಸಾರ್ವಜನಿಕರ ಗಮನ ಸೆಳೆಯುವಂತೆ ಉದ್ಘಾಟಿಸಿರುವ ಬಾಲಕೃಷ್ಣ ಸುವರ್ಣ ಬದುಕಿನಲ್ಲಿ ಅನುಭವದ ಪಾಠಗಳಿಂದ ಬೆಳೆದು ಮಾದರಿಯಾಗಿದ್ದಾರೆ ಎಂದರು.
ಹೊಸ ಉದ್ಯಮ, ಉದ್ಯಮಿಯನ್ನು ಪ್ರೋತ್ಸಾಹಿಸುವಂತೆ ಬಾಲಕೃಷ್ಣ ಸುವರ್ಣ ಕೋರಿದರು. ಶ್ರೀಮತಿ ಸುಪ್ರೀತಾ ಬಿ.ಸುವರ್ಣ, ಮಾತೃಶ್ರೀ ನೀಲಮ್ಮ ಜಿನ್ನಪ್ಪ ಪೂಜಾರಿ, ಬೆಳ್ತಂಗಡಿ ಮದ್ದಡ್ಕದ ಜಯರಾಮ್ ಸಾಲ್ಯಾನ್, ಪ್ರೇಮಾ ಜೆ. ಸಾಲ್ಯಾನ್, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಜಿ,ಪಂ. ಮಾಜಿ ಸದಸ್ಯ ಚಂದ್ರಹಾಸ ಸನಿಲ್, ಸಂತೋಷ್ ಶೆಟ್ಟಿ, ಉದ್ಯಮಿ ಜಬ್ಬಾರ್ ಮಾರಿಪಳ್ಳ, ಅಂಬೋಡಿ ಮಾರ್ ರಘುನಾಥ ದೇವಾಡಿಗ, ಸಂಸ್ಥೆಯ ಕಾನೂನು ಸಲಹೆಗಾರ ನ್ಯಾಯವಾದಿ ಮೋಹನ್ ರಾಜ್, ಉದ್ಯಮಿ ಎಂಎಫ್ ಸಿ ಚಾಯ್ ಮಾರ್ಟ್ ನ ಸಿದ್ಧಿಕ್ ಮಂಗಳೂರು ಮತ್ತಿತರರು, ಆಡಳಿತ ವರ್ಗದ ಸಿಬಂದಿಗಳು ಉಪಸ್ಥಿತರಿದ್ದರು.
ಮನು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.