ಬೈಲೂರು: ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಇದೀಗ ಕಳ್ಳತನಗಳು ಆರಂಭವಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
2023ರಲ್ಲಿ ಅಂದಿನ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಯಾದ ಬೈಲೂರು ಥೀಮ್ ಪಾರ್ಕಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪರಶುರಾಮ ಮೂರ್ತಿಯ ಗೊಂದಲದಿಂದ ನಂತರದ ದಿನಗಳಲ್ಲಿ ಇಲ್ಲಿಯ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ. ನಂತರ ಇಲ್ಲಿ ಯಾವುದೇ ಕೆಲಸಗಳು ನಡೆಯದೆ ಜನರ ಪ್ರವೇಶಕ್ಕೂ ಅವಕಾಶ ನೀಡದೆ ಪಾಳು ಬೀಳುವಂತಾಗಿದೆ. ಇಲ್ಲಿ ಬೆಲೆಬಾಳುವ ವಿದ್ಯುತ್ ಉಪಕರಣವನ್ನು ಅಳವಡಿಸಲಾಗಿದ್ದು, ಸರಿಯಾದ ಭದ್ರತೆ ಇಲ್ಲದೆ ಇಲ್ಲಿಯ ಫ್ಯಾನುಗಳನ್ನು ಕಳ್ಳರು ಕಳವು ಮಾಡುತ್ತಿರುವುದು ಕಂಡುಬರುತ್ತದೆ.
ಇತ್ತೀಚೆಗೆ ಇಲ್ಲಿ ಅಳವಡಿಸಲಾಗಿರುವ ಫ್ಯಾನುಗಳನ್ನು ಯಾರೋ ವಿದ್ಯಾರ್ಥಿಗಳು ಕಿತ್ತು ಕಳವು ಮಾಡಿದ್ದು, ಇವರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ವಿದ್ಯಾರ್ಥಿಗಳಿಂದ ಫ್ಯಾನ್‌ಗಳನ್ನು ವಶಪಡಿಸಿಕೊಂಡ ಘಟನೆಯು ನಡೆದಿದೆ.
ಈ ಬಗ್ಗೆ ನಿರ್ಮಿತಿ ಕೇಂದ್ರದವರು ಜಿಲ್ಲಾಧಿಕಾರಿಯವರಿಗೆ ಮೌಕಿಕವಾಗಿ ದೂರು ನೀಡಿದ್ದು ಜಿಲ್ಲಾಧಿಕಾರಿಯವರು ಇಲ್ಲಿಗೆ ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ರೀತಿ ಇಲ್ಲಿಗೆ ಸರಿಯಾದ ಭದ್ರತೆ ನೀಡದಿದ್ದಲ್ಲಿ ಇಲ್ಲಿ ಅಳವಡಿಸಲಾಗಿರುವ ವಿದ್ಯುತ್ ಉಪಕರಣಗಳು ಇನ್ನಿತರ ವಸ್ತುಗಳು ಕಳ್ಳರ ಪಾಲಾಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಇಲಾಖೆಯು ಸೂಕ್ತ ಗಮನ ಹರಿಸುವ ಅಗತ್ಯವಿದೆ.