ಶ್ರೀಮಂತ ವರ್ಗದ ಜನರಿಗೆ ಸೇವೆ ನೀಡುವ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಸಹಕಾರಿ ಸಂಘಗಳು ಗ್ರಾಮಿಣ ಭಾಗದ ಜನರ ಬಳಿ ತೆರಳಿ ಸೇವೆ ನೀಡುತ್ತಿದೆ ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆರ್ವಾಶೆ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರ ಗ್ರಾಮೀಣ ಭಾಗದಲ್ಲಿ ಆರ್ಥಿಕ ಕ್ರಾಂತಿ ಮೂಡಿಸಿದ್ದು, ಬಡವರ್ಗದ ಜನತೆಗೆ ಆಶಾಕಿರಣವಾಗಿದೆ. ಜಿಲ್ಲೆಯ 170 ಅಧಿಕ ಸಹಕಾರಿ ಸಂಘ ಲಾಭದಲ್ಲಿದ್ದು, ಜನರು ಸಹಕಾರಿ ಕ್ಷೇತ್ರದ ಮೇಲಿಟ್ಟ ನಂಬಿಕೆ ಭರವಸೆಯಿಂದ ಇದ್ದು ಸಾಧ್ಯವಾಗಿದೆ. ಜನರ ಅಗತ್ಯಕ್ಕೆ ಅನುಗುಣವಾಗಿ ಸಾಲ ನೀಡಿ ಹಣದ ಅವಶ್ಯಕತೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿರಿ ಎಂದರು. ಸಾಲ ವಸೂಲಾತಿಯಲ್ಲಿ ಸಾಧನಗೈದ ನಿಮ್ಮನ್ನು ಡಿಸಿಸಿ ಬ್ಯಾಂಕ್‌ನ ಜನರಲ್ ಬಾಡಿ ಸಭೆಯಲ್ಲಿ ವಿಶೇಷವಾಗಿ ಗೌರವಿಸಲಾಗುವುದು ಎಂದರು.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಸಂಘಗಳು ಉತ್ತಮ ಸೇವೆಗಳನ್ನು ನೀಡುತ್ತ ಜನರ ಪ್ರಶಂಸೆಗೆ ಪಾತ್ರವಾಗಿದೆ. ಮಾಳ ಕರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘವು ಸುಧೀರ್ಘ ವರ್ಷಗಳಿಂದ ಈ ಭಾಗದ ಜನರ ಆರ್ಥಿಕತೆಗೆ ಪ್ರೋತ್ಸಾಹ ನೀಡುತ್ತ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಇಂದು ಸಹಕಾರಿ ಸಂಘವು ಬೆಳೆಯಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ವಾಣಿಜ್ಯ ಬ್ಯಾಂಕ್‌ಗಳಿಗಿಂತಲೂ ಸಹಕಾರಿ ಬ್ಯಾಂಕ್‌ಗಳು ಹತ್ತಿರವಾಗುತ್ತಿದೆ. ಸಹಕಾರಿ ಸಂಸ್ಥೆಗಳು ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಗಳ ಮೂಲಕ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇದರೊಂದಿಗೆ ಸುಸಜ್ಜಿತ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸಹಕಾರಿ ಸಂಸ್ಥೆಗಳ ಬೆಳವಣೆಗೆಯನ್ನು ಸೂಚಿಸಿತ್ತದೆ ಎಂದರು.
ಈ ಸಂಧರ್ಭದಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 624 ಅಂಕಗಳಿಸಿದ ಪ್ರಕೃತಿ ಗುಡಿಗಾರ್ ಅವರನ್ನು ಸಮಾನಿಸಲಾಯಿತು. ಎಸ್.ಡಿ.ಸಿಸಿ.ಬ್ಯಾಂಕಿನ ವತಿಯಿಂದ ಪ್ರಕೃತಿ ಗುಡಿಗಾರ್‌ಗೆ 10 ಸಾವಿರ ರೂ. ಧನ ಸಹಾಯದ ಚೆಕ್‌ನ್ನು ನೀಡಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಗ್ರಾ. ಪಂ. ಅಧ್ಯಕ್ಷೆ ಸುನೀತಾ ಪೂಜಾರಿ, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟಿ, ಕಾರ್ಕಳ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸುನಿಲ್ ಕುಮಾರ್ ಬಜಗೋಳಿ, ಮಾಳ ಕೆರ್ವಾಶೆ ಸೇವಾ ಸಹಕಾರಿ ಸಂಘದ ಕೆರ್ವಾಶೆ ಸಂಘದ ಉಪಾಧ್ಯಕ್ಷ ನಾಗೇಶ್ ಭಂಡಾರಿ, ನಿರ್ದೇಶಕರಾದ ಅನಿಲ್ ಎಸ್. ಪೂಜಾರಿ, ಅಕ್ಷಯ್ ಕುಮಾರ್, ಸುಧಾಕರ್ ಡೋಂಗ್ರೆ, ನಂದುಗೋಪನ್ ಕೆ. ಆರ್. ಉಷಾ ಶೆಟ್ಟಿ, ರಾಜೇಶ್ವರ್ ನಾಯ್ಕ್, ಅಣ್ಣಿ ಪರವ, ಸಹಕಾರ ಸಂಘ ವಲಯ ಮೇಲ್ವಿಚಾರಕ ಜಯಂತ್ ಕುಮಾರ್, ವೃತ್ತಿಪರ ನಿರ್ದೇಶಕ ಜಯರಾಮ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ. ಸುವರ್ಣ ಪ್ರಸ್ತಾವನೆಗೈದರು. ಅಧ್ಯಕ್ಷ ಕೃಷ್ಣ ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ವೆಂಕಟೇಶ್ ಗೋರೆ ವಂದಿಸಿದರು, ಪ್ರಜ್ವಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು.