ಮಂಜುನಾಥ್ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾರ್ಕಳ ಇಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಮತ್ತು ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುವನಿಧಿಯ ಕುರಿತು ಪ್ರಚಾರ ಮತ್ತು ನೋಂದಣಿ ಅಭಿಯಾನವನ್ನು ಕೈಗೊಳ್ಳಲಾಯಿತು.
ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ ಅವರು ಸರ್ಕಾರದ ಈ ಯೋಜನೆ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಉದ್ಯೋಗ ದೊರಕುವ ತನಕ ಎಲ್ಲಾ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿ ದೀಕ್ಷಿತ್ ಅವರು ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಪಡೆದುಕೊಳ್ಳುವ ಬಗ್ಗೆ ಮತ್ತು ಮಾನದಂಡಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಡಾ. ಸುರೇಶ ರೈ ಅವರು ಅಧ್ಯಕ್ಷತೆ ವಹಿಸಿ ಸರ್ಕಾರದಿಂದ ಕೊಡಮಾಡುವ ಯುವನಿಧಿ ಮೊತ್ತ ನಿರುದ್ಯೋಗಿಗಳಿಗೆ ಬಹಳಷ್ಟು ಸಹಕಾರಿ ಆಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಎಂದು ತಿಳಿಸಿದರು.
ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರಾದ ಫಿಲಿಪ್ ಮಸ್ಕರೇನಸ್, ವಿಶ್ವನಾಥ್ ಭಂಡಾರಿ, ಚರಿತ ಎಂ ಮತ್ತು ಕಾಲೇಜಿನ ಉಪನ್ಯಾಸಕರಾದ ಡಾ. ಸುಬ್ರಮಣ್ಯ ಕೆ. ಸಿ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.