ಸಾಣೂರು: ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನ, ಸಾಣೂರು, ಕಾರ್ಕಳದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮ ಆ.15ರಂದು ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಬ್ರಿಗೇಡಿಯರ್ ಪಿ. ಎನ್. ರೈ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ನಾವು ಸುಮಾರು ೨೦೦ ವರ್ಷಗಳ ಕಾಲ ಹೇಗೆ ಗುಲಾಮರಾಗಿ ಉಳಿದೆವು ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ನಮ್ಮೊಳಗೆ ಕೇಳಿಕೊಳ್ಳಬೇಕು. ದೇಶದ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಹೊಣೆಗಾರಿಕೆಯಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹನೀಯರನ್ನು ಸದಾ ಸ್ಮರಿಸಬೇಕು. ಭಾರತೀಯರೆಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಇರಬೇಕು. ‘ದೇಶ ಮೊದಲು’ ಎಂಬ ಭಾವನೆ ನಮ್ಮೆಲ್ಲರಲ್ಲೂ ಮೂಡಬೇಕು” ಎಂದು ಕರೆ ನೀಡಿದರು. ದೇಶಭಕ್ತಿ, ಶಿಸ್ತು, ಏಕತೆ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರದ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ನಂತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭ ನಡೆಯಿತು.
ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿ ಪರಿಷತ್ತಿನ ಮಹತ್ವವನ್ನು ವಿವರಿಸಿದರು.

ಅತಿಥಿ ಈಶ್ವರ್ ಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ನೀವು ಸೌಲಭ್ಯಗಳನ್ನು ಪಡೆಯಲು ಬಂದವರಲ್ಲ; ಸಾಧ್ಯತೆಗಳನ್ನು ಸೃಷ್ಟಿಸಲು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಬಂದಿದ್ದೀರಿ” ಎಂದು ಹೇಳಿದರು. “ಒಂದು ವರ್ಷದಲ್ಲಿ ನಾನು ಯಾವ ಬದಲಾವಣೆಯನ್ನು ತಂದಿದ್ದೇನೆ? ಶಾಲೆಗೆ ಯಾವ ಕೊಡುಗೆಯನ್ನು ನೀಡಿದ್ದೇನೆ?” ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮಗೆ ವಹಿಸಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ತಮ್ಮ ಅವಧಿಯಲ್ಲಿ ಶಾಲೆಯಲ್ಲಿ ಉತ್ತಮ ಬದಲಾವಣೆಯನ್ನು ತರಬೇಕು ಎಂದು ಅವರು ಸಲಹೆ ನೀಡಿದರು.

ಬಿಜಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಮನಗುಟ್ಟಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸಿದರೆ ಅವರು ಮುಂದೊಂದು ದಿನ ದೇಶದ ಆಸ್ತಿಯಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಅಗತ್ಯವಾದ ವಿವಿಧ ಸಂಸ್ಕಾರ ಹಾಗೂ ಮೌಲ್ಯಗಳು ಒಂದೇ ಸೂರಿನಡಿ ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನದಲ್ಲಿ ದೊರೆಯುತ್ತಿರುವುದು ಎಲ್ಲರ ಭಾಗ್ಯ ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದೀಶ್ ಸುಬ್ರಮಣ್ಯ, ಹಾಗೂ ಉಪಾಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಸುಪ್ರಿಯ ಆಯ್ಕೆಯಾದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಶ್ವೇತಾ ಡಿ. ಶೆಟ್ಟಿ, ಪ್ರಾಂಶುಪಾಲರಾದ ಡಾ. ರಶ್ಮಿ ಕೆ., ಮುಖ್ಯೋಪಾಧ್ಯಾಯರಾದ ಪ್ರಣವ್ ಭಟ್, ಬ್ರಿಗೇಡಿಯರ್ ಪಿ. ಎನ್. ರೈ, ಚಾವಡಿ ಮನೆ ಜಗನ್ನಾಥ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದ ಅಧ್ಯಾಪಕಿ ಕುಮಾರಿ ರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಅಪೇಕ್ಷಾ ಧನ್ಯವಾದವಿತ್ತರು.
ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ‘ರಾಷ್ಟ್ರದೇವೋಭವ’ ಖ್ಯಾತಿಯ ಸನಾತನ ನಾಟ್ಯಾಲಯ, ಮಂಗಳೂರು ಇವರ ವತಿಯಿಂದ ‘ಸನಾತನ ರಾಷ್ಟ್ರಾಂಜಲಿ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
