ತುಳುನಾಡಿನಲ್ಲಿ ಸುಮಾರು 5ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮೂಲ ನಿವಾಸಿ ಸಮುದಾಯದ ಆದಿದ್ರಾವಿಡ ಜನರ ಬದುಕಿನಲ್ಲಿ ಬದಲಾವಣೆ ತರಬಹುದಾದ ಯಾವುದೇ ಯೋಜನೆಯನ್ನು ಕರ್ನಾಟಕ ಸರಕಾರ ಮಂಗಳೂರಿನ ಅಧಿವೇಶನದಲ್ಲಿ ಪ್ರಕಟಿಸದೆ ಅನ್ಯಾಯವೆಸಗಿರುವುದಾಗಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಆದಿದ್ರಾವಿಡ ಸಮುದಾಯದ ಕುಲದೈವಗಳಾದ ಶ್ರೀ ಸತ್ಯಸಾರಾಮಣಿ, ಕಾನದಕಟದರ ಮೂಲಕ್ಷೇತ್ರ ಮೂಡುಬಿದಿರೆಯ ಮಿಜಾರಿನ ಅಲೇರಿಯಲ್ಲಿರುವ ಜಾಗದ ಜೀರ್ಣೋದ್ಧಾರ ಕಾರ್ಯಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ವಿಧಾನಸಭಾ ಚುನಾವಣಾ ಸಂದರ್ಭ ಮಾಡಿದ ಘೋಷಣೆಯನ್ನು ಈವರೆಗೂ ಅನುಷ್ಠಾನಗೊಳಿಸದೆ ನಮ್ಮ ನಿರೀಕ್ಷೆಗೆ ಅನ್ಯಾಯವೆಸಗಲಾಗಿದೆ ಎಂದು ಸಂಘ ಆರೋಪಿಸಿದೆ.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆದಿದ್ರಾವಿಡ ಸಮಾಜ ಸೇವಾ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷ ಶಿವರಾಮ್ ಹಾಗೂ ಅಲೇರಿ ಶ್ರೀ ಸತ್ಯಸಾರಾಮಣಿ ಕಾನದಕಟದ ಮೂಲಕ್ಷೇತ್ರದ ಮೂಡುಬಿದಿರೆ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪುಚ್ಚಮೊಗರು ಅವರು ತುಳುಭಾಷಿಕ ಆದಿದ್ರಾವಿಡ ಸಮುದಾಯಕ್ಕೆ ಆರ್ಥಿಕ ಸೌಕರ್ಯ ಒದಗಿಸದೆ ಸಂಕಷ್ಟಕ್ಕೆ ತಳ್ಳಲಾಗಿದೆ. ರಾಜ್ಯ ಸರಕಾರ ನಮ್ಮ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ದೂರಿದರು.
ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸುವ ಅಗತ್ಯವಿದ್ದು ಈ ಬಗ್ಗೆ ಕೂಡಲೇ ಸರಕಾರ ಕ್ರಮಕೈಗೊಂಡು ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಸಮುದಾಯದ ಪ್ರಮುಖರು ಸತತ ಮೂರುವರೆ ವರ್ಷಗಳಿಂದ ಸರಕಾರದ ಜೊತೆ ನಿಕಟ ಸಂಪರ್ಕ ನಡೆಸಿ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಮಂಗಳೂರಿನಲ್ಲಿ ರಾಜ್ಯ ಕ್ಯಾಬಿನೆಟ್ ಸಭೆ ನಡೆಯುವ ವಿಚಾರ ತಿಳಿದು ಡಿಸಿ ಮನ್ನಾ ಭೂಮಿ ಹಂಚಿಕೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಪ್ರಮುಖರಿಗೆ ತಿಳುವಳಿಕೆ ನೀಡಿದರೂ ಈವರೆಗೆ ಪ್ರಯೋಜನವಾಗಿಲ್ಲ. ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಯಾವುದೇ ಅನುದಾನ ಹಾಗೂ ಯೋಜನೆಗಳನ್ನು ಪ್ರಕಟಿಸದೆ ನಮ್ಮ ಬೇಡಿಕೆಗಳಿಗೆ ಅಗೌರವ ನೀಡಿದಂತಾಗಿದೆ ಎಂದು ತಿಳಿಸಿದರು. ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ವಿಚಾರ ತಿಳಿಸಿದಾಗ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಆದರೆ ಈ ಗಡುವು ಕೂಡ ಮುಗಿದು ಹೋಗಿದ್ದು, ಅಕ್ಟೋಬರ್ ತಿಂಗಳಲ್ಲಿ ಸಮುದಾಯದ ಜನರು ಒಗ್ಗೂಡಿ ಪ್ರತಿಭಟನೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಸುರೇಶ್, ದಿನೇಶ್ ಉಪಸ್ಥಿತರಿದ್ದರು.
