ಮಾನವ ಜನ್ಮ ದೊಡ್ಡದು. ಭಗವಂತ ಕೊಟ್ಟಿರುವ ಈ ಮಾನವ ಜನ್ಮ ಸಾರ್ಥಕ ಗೊಳಿಸಲು ಜೀವನದಲ್ಲಿ ವಿನಯ, ಕರುಣೆ, ಮಾನವೀಯತೆ, ವೈರಿಗಳನ್ನು ಪ್ರೀತಿಸುವುದು, ಧರ್ಮ ರಕ್ಷಣೆ, ಅಸಹಾಯಕರಿಗೆ ಸಹಾಯ, ಕ್ಷಮಾಪಣೆ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಕಳದ ಅಂತರಾಷ್ಟ್ರೀಯ ಖ್ಯಾತಿಯ ಲೆಕ್ಕಪರಿಶೋಧಕ, ಸಮಾಜ ಸೇವಕ ಮತ್ತು ಕೊಡುಗೈ ದಾನಿ ಕೆ. ಕಮಲಾಕ್ಷ ಕಾಮತ್ ತಿಳಿಸಿದರು.
ಅವರು ಕಾರ್ಕಳ ತಾಲೂಕು ಹಿರಿಯ ನಾಗರಿಕ ಸಂಘದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಂ ಕಮಲಾಕ್ಷ ಕಾಮತ್ ವಹಿಸಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ, ಮಿಲಿಟರಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶ್ರೀಮತಿ ಲಲಿತಾ, ಸುಬೇದಾರ್ ಅಜಿತ್ ಕುಮಾರ್ ಜೈನ್ ಮತ್ತು ಜಾರ್ಜ್ ಕ್ಯಾಸ್ಟಲಿನೋ ಅವರನ್ನು ಶಾಲು, ಹಾರ, ಫಲ ಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವಾಧ್ಯಕ್ಷ ಕೆ ವಾಸುದೇವ ರಾವ್ ಮತ್ತು ಅತಿಥಿ ಡಾ. ಮಂಜುನಾಥ್ ಕಿಣಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಕೆ ಜಯರಾಮ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ಜಗದೀಶ್ ಗೋಖಲೆ ಗತವರ್ಷದ ವರದಿ ಸಲ್ಲಿಸಿದರು. ಹೆಚ್ ವೆಂಕಟರಾಯ ಪ್ರಭು ಆಯವ್ಯಯ ಮಂಡಿಸಿದರು. ಶೇಖರ್ ಎಚ್ ಸ್ವಾಗತಿಸಿ, ಕೆ ಕೇಶವ ನಂಬಿಯಾರ್ ವಂದಿಸಿದರು. ನಿವೃತ್ತ ಶಿಕ್ಷಕಿ ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಿ.ರವೀಂದ್ರ ಕಾಮತ್ ವಂದಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಜೋಕಿಂ ಮೈಕಲ್ ಪಿಂಟೋ, ಪಾಂಡುರಂಗ ಮಲ್ಯ ಪ್ರದೀಪ್ ನಾಯಕ್, ಶಶಿಕಾಂತ್ ಶೆಟ್ಟಿ, ಐ.ಮೋಹನದಾಸ್ ಪೈ, ಸದಾನಂದ ಶೆಟ್ಟಿ ಸಹಕರಿಸಿದರು.
