ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದಲ್ಲಿ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ವತಿಯಿಂದ 15ನೇ ವರ್ಷದ ಜೋಡುಕರೆ ಕಂಬಳ ನವೆಂಬರ್ 9ರಂದು ಶನಿವಾರ ನಡೆಯಲಿದೆ ಎಂದು ಜಿಲ್ಲಾ ಕಂಬಳ ತೀರ್ಪುಗಾರರ ಸಂಚಾಲಕರಾದ ವಿಜಯ್ ಕುಮಾರ್ ಜೈನ್ ಕಂಗಿನಮನೆ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಕಂಬಳದ ಯುವ ಓಟಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಣಪಿಲದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಂಬಳದ ಓಟಗಾರರಾಗಿ ಮಾಡಿದ ಸಾಧನೆಗೆ ರಾಜ್ಯ ಸರಕಾರದಿಂದ ಕ್ರೀಡಾರತ್ನ ಪ್ರಶಸ್ತಿ ಪಡೆದ ಪ್ರವೀಣ್ ಕೋಟ್ಯಾನ್‌ಗೆ ಪಣಪಿಲ ಕಂಬಳ ಪ್ರೇರಣೆಯಾಗಿದೆ.
133.5 ಮೀ ಉದ್ದದ ಕಂಬಳ ಕರೆಯಲ್ಲಿ ಓಟಕ್ಕೆ ಸಬ್ ಜೂನಿಯರ್, ಜೂನಿಯರ್ ಹಾಗೂ ಹಗ್ಗ ಕಿರಿಯ ಸೇರಿದಂತೆ ಸುಮಾರು 200 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24ಗಂಟೆಯೊಳಗೆ ಕಂಬಳ ಸ್ಪರ್ಧೆಯನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ನವೆಂಬರ್ 9ರಂದು ಬೆಳಿಗ್ಗೆ 8 ಗಂಟೆಗೆ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಲಿದ್ದು ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸುವರು. ಸಮಿತಿ ಗೌರವ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯರಾದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರು ಭಾಗವಹಿಸಲಿದ್ದಾರೆ.
ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು, ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ ದರೆಗುಡ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ಥ ಪಣಪಿಲ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.