ಮೂಡುಬಿದಿರೆ: ಗೇರು ಉದ್ಯಮ ಏರು ಪೇರಿನ ನಡೆ ಹೊಂದಿದ್ದು ಇಲ್ಲಿ ಎಚ್ಚರಿಕೆಯ ಅನುಭವದ ನಡೆಯಿಂದ ಯಶಸ್ಸು ಕಾಣಲು ಸಾಧ್ಯವಿದೆ. ಯುವ ಉದ್ಯಮಿಗಳು ಅನುಭವದ ಕೊರತೆಯನ್ನು ಮೆಟ್ಟಿ ನಿಂತಾಗ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ಗೇರು ಉದ್ಯಮಿ ಬೋಳ ಪ್ರಭಾಕರ ಕಾಮತ್ ನುಡಿದರು.
ಅವರು ಮೂಡುಬಿದಿರೆಯ ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್ ಆವರಣದಲ್ಲಿ ಕರ್ನಾಟಕ ಗೇರು ಉತ್ಪಾದಕರ ಅಸೋಸಿಯೇಶನ್ ( ಕೆಸಿಎಂಎ) ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದ ಬೊಕ್ಕಸಕ್ಕೆ ಆದಾಯ, ಉದ್ಯೋಗದಾತರಾಗಿರುವ ಗೇರು ಉತ್ಪಾದಕರನ್ನು ಸರಕಾರ ಪ್ರೋತ್ಸಾಹಿಸುವ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಕೆಸಿಎಂಎ ವತಿಯಿಂದ ಹಿರಿಯ ಉದ್ಯಮಿಗಳ ಸಮ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ಇನ್ನೋರ್ವ ಉದ್ಯಮಿ ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್‌ನ ಕೆ. ಶ್ರೀಪತಿ ಭಟ್ ಸಮತೋಲನದಿಂದ ಸಾಧನೆ, ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಸಿ.ಎಂ.ಎ ಅಧ್ಯಕ್ಷ ಅನಂತ ಕೃಷ್ಣ ರಾವ್ ಮಾತನಾಡಿ ಕರಾವಳಿಯಲ್ಲಿ ಗೇರು ಉದ್ಯಮದ ಶತಮಾನೋತ್ಸವ ಸಂಭ್ರಮ ಕಾಣುತ್ತಿರುವ ಮುಂದಿನ ವರ್ಷ ನವೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಅರ್ಥಪೂರ್ಣ ಸಮ್ಮೇಳನ ನಡೆಸುವ ಯೋಜನೆಯಿದೆ. ಗೇರು ಉತ್ಪಾದನೆಯನ್ನು ಹೆಚ್ಚಿಸುವ, ಸ್ವಾವಲಂಬಿಯಾಗಿ ಬೆಳೆಯುವ ಸವಾಲನ್ನೆದುರಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು. ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಅಭಿವೃದ್ಧಿಗೆ ಗೇರು ಉದ್ಯಮಿಗಳ ಕೊಡುಗೆಗೆ ಪ್ರತಿಯಾಗಿ ಅವರಿಗೂ ಗೌರವದ ಜೀವನ ದೊರೆಯುವಲ್ಲಿ ಸರಕಾರದ ಪ್ರೋತ್ಸಾಹಕ್ಕಾಗಿ ಗಮನ ಸೆಳೆಯುವುದಾಗಿ ಅವರು ನುಡಿದರು.
ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್ ಸಂಸ್ಥೆಯ ವತಿಯಿಂದ ಕೆ.ಸಿ.ಎಂ.ಎ ಅಧ್ಯಕ್ಷ ಅನಂತ ಕೃಷ್ಣ ರಾವ್ ಅವರನ್ನು ಗೌರವಿಸಲಾಯಿತು.
ಅಖಿಲ ಭಾರತ ಗೇರು ಉದ್ಯಮಿಗಳ ಸಂಘಟನೆಯ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಮಾತನಾಡಿ ದೇಶದ ಆಮದು ರಫ್ತಿನ ಮೊದಲ 5 ಸ್ಥಾನಗಳಲ್ಲಿ ಗೇರು ಉದ್ಯಮವಿದೆ. ಇಚ್ಛಾಶಕ್ತಿಯಿಂದ ಉದ್ಯಮದ ಸವಾಲುಗಳನ್ನು ಎದುರಿಸಿ ಎಂದರು.
ಕೆಸಿಎಂಎ ಕಾರ್ಯದರ್ಶಿ ಅಮಿತ್ ಪೈ ಸಂಘಟನೆಯ ತ್ರೈಮಾಸಿಕ ವರದಿ ವಾಚಿಸಿದರು. ಕ್ಯಾಶ್ಯೂ ಇನ್ಫೋದ ಶ್ರೀವಾಸ್ತವ ಅವರು ದುಬೈನಲ್ಲಿ ಮುಂದಿನ ಫ್ರೆಬ್ರವರಿಯಲ್ಲಿ ಜರಗಲಿರುವ ವಿಶ್ವ ಗೇರು ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಜತೆ ಕಾರ್ಯದರ್ಶಿ ಸನತ್ ಪೈ ವಂದಿಸಿದರು. ಕೆಸಿಎಂಎ ನಿರ್ವಾಹಕ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.