ಕಾರ್ಕಳ: 2025-26ರ ಶೈಕ್ಷಣಿಕ ವರ್ಷದಲ್ಲಿ 99.85% ಫಲಿತಾಂಶ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮತ್ತು ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕಾರ್ಕಳ ಶೈಕ್ಷಣಿಕ ವಲಯದ ( ಕಾರ್ಕಳ ಮತ್ತು ಹೆಬ್ರಿ ತಾ.) ಶಾಲೆಗಳನ್ನು ಗೌರವಿಸಿ ಅಭಿನಂದಿಸುವ ಯಶೋಯಾನ -2026 ಕಾರ್ಯಕ್ರಮವು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ತಾಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ ಮತ್ತು ಕ್ರಿಯೇಟಿವ್ ವಿದ್ಯಾಸಂಸ್ಥೆಗಳು ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದವು.
ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ದಾನಿಗಳಾದ ಸಿಎ ಕಮಲಾಕ್ಷ ಕಾಮತ್ ಅವರು ಶಾಲೆಯು ಉತ್ತಮ ಫಲಿತಾಂಶವನ್ನು ಪಡೆದಾಗ ಎಲ್ಲ ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಂಪ್ರದಾಯ ಇರುತ್ತದೆ . ಆದರೆ ಫಲಿತಾಂಶಕ್ಕೆ ದುಡಿದ ಶಿಕ್ಷಕರ ಪರಿಶ್ರಮಕ್ಕೆ ಹೆಚ್ಚಿನ ಕಡೆಗಳಲ್ಲಿ ಗೌರವ ದೊರೆಯುವುದಿಲ್ಲ. ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರು. ಅವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ ಆಗಿದೆ’ ಎಂದರು. ಕಾರ್ಕಳ ಶೈಕ್ಷಣಿಕ ವಲಯದ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ ೫೭ ಪ್ರೌಢಶಾಲೆಗಳನ್ನು ಶಾಲು, ನೆನಪಿನ ಕಾಣಿಕೆ ಮತ್ತು ಹಣ್ಣಿನ ಗಿಡ ನೀಡಿ ಅವರು ಸನ್ಮಾನಿಸಿದರು. ಶಾಲೆಗಳ ಪರವಾಗಿ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಈ ಸನ್ಮಾನಗಳನ್ನು ಸ್ವೀಕಾರ ಮಾಡಿದರು.
ಅದೇ ರೀತಿ ಕಾರ್ಕಳದ ವಿವಿಧ ಪ್ರೌಢಶಾಲೆಗಳ ನಾಲ್ಕು ವಿಭಾಗಗಳ ಟಾಪ್ 11 ವಿದ್ಯಾರ್ಥಿಗಳನ್ನು ಅವರ ಹೆತ್ತವರ ಜೊತೆಗೆ ಪ್ರಶಸ್ತಿ ಫಲಕ, ಶಾಲು, ಹಣ್ಣಿನ ಗಿಡಗಳು ಮತ್ತು ನಗದು ಬಹುಮಾನಗಳ ಜೊತೆಗೆ ಅಭಿನಂದಿಸಲಾಯಿತು. ಕಾರ್ಕಳದ ಅಶೋಕ್ ರಾವ್ ಸ್ಮಾರಕ ಟ್ರಸ್ಟ್ ಮತ್ತು ಜೆಸಿಐ ಬೆಳ್ಮಣ್ ಈ ನಗದು ಬಹುಮಾನಗಳ ಪ್ರಾಯೋಜಕರಾಗಿದ್ದರು.
ಕಾರ್ಯಕ್ರಮದಲ್ಲಿ ಶಿಖರೋಪನ್ಯಾಸ ನೀಡಿದ ಉಡುಪಿ ಡಯಟ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಅವರು ಕಾರ್ಕಳ ಶೈಕ್ಷಣಿಕ ವಲಯದ ಸಾಧನೆಗಳನ್ನು ಅಭಿನಂದಿಸಿ ಮಾತನಾಡಿ ’ಶಾಲೆಗಳ ಫಲಿತಾಂಶವು ಶೈಕ್ಷಣಿಕ ಸಾಧನೆಯ ಒಂದು ಉಪ ಉತ್ಪನ್ನ ಮಾತ್ರ. ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ವರ್ಧನೆ, ನಾಗರಿಕ ಅರಿವು, ಹೃದಯ ಶ್ರೀಮಂತಿಕೆ ಇವುಗಳನ್ನು ನೆಲೆಸುವುದು ಕೂಡ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಶಿಕ್ಷಕರು ತಮ್ಮ ಪ್ರಾಮಾಣಿಕ ಕರ್ತವ್ಯದ ಮೂಲಕ ಉತ್ತಮ ರಾಷ್ಟ್ರವನ್ನು ಕಟ್ಟಲು ಸಾಧ್ಯ ’ ಎಂದರು.
ಕಾರ್ಯಕ್ರಮದ ಅತಿಥಿಯಾಗಿದ್ದ ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕರಾದ ವಿನಾಯಕ ಜೋಗ್ ಮತ್ತು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕಲ್ಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಭಾಸಚಂದ್ರ ಶೆಟ್ಟಿಗಾರ್, ದಾನಿಗಳಾದ ಕಮಲಾಕ್ಷ ಕಾಮತ್, ಡಾ. ಅಶೋಕ್ ಕಾಮತ್, ಕ್ರಿಯೇಟಿವ್ ಸಂಸ್ಥೆಯ ವಿನಾಯಕ ಜೋಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಕಳ ವಲಯದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಭಾಸ್ಕರ್ ಟಿ ಸ್ವಾಗತಿಸಿದರು. ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಮತ್ತು ತಾ. ಅಧ್ಯಕ್ಷ ಆನಂದ, ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರಾದ ಇಂದಿರಾ ಅವರು ಶುಭಾಶಂಸನೆ ಸಲ್ಲಿಸಿದರು.
ಅಪರ್ಣ ಮತ್ತು ಸ್ಮಿತಾ ಭಂಡಾರಿ ಪರಿಚಯ ಮಾಡಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಸದಾಶಿವ ಬಾಯರಿ ಧನ್ಯವಾದ ಸಲ್ಲಿಸಿದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.
