*ಬಿಜೆಪಿಯ ದ್ವೇಷ ಕಾರಣಕ್ಕೆ ವಿದ್ಯಾರ್ಥಿಗಳೇ ತಕ್ಕ ಪಾಠ ಕಲಿಸಲಿದ್ದಾರೆ: ಪ್ರದೀಪ್ ಬೇಲಾಡಿ*
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಕಾರ್ಕಳ ಕಾಂಗ್ರೆಸ್ ನಡೆಸಿದ ಧರಣಿ ಸತ್ಯಾಗ್ರಹದ ಬಗ್ಗೆ ಕಾರ್ಕಳ ಬಿಜೆಪಿ ಮುಖಂಡರ ಹೇಳಿಕೆಯು ಹತಾಶೆಯ ಪ್ರತೀಕದಂತಿದ್ದು ಇದು ಅನಾವಶ್ಯಕ ಗೊಂದಲ ಸೃಷ್ಟಿಸುವಂತಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.
2013ರಲ್ಲಿ ದೇಶದಲ್ಲಿ ನೀಟ್ ಮೊದಲ ಬಾರಿ ಜಾರಿಯಾದಾಗ ಕೆಲವು ಖಾಸಗಿ ಕಾಲೇಜುಗಳು ಅದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದವು, ಅದೇ ವರ್ಷ ಸುಪ್ರೀಂಕೋರ್ಟ್ ನೀಟ್ ಪರೀಕ್ಷೆಯನ್ನು ರದ್ದುಪಡಿಸಿರುವುದರಿಂದ 2014 ಮತ್ತು 20 15 ರಲ್ಲಿ ನೀಟ್ ಪರೀಕ್ಷೆ ನಡೆದಿರಲ್ಲಿಲ್ಲ. 2016ರಲ್ಲಿ ಸುಪ್ರೀಂ ಕೋರ್ಟ್ ಹಿಂದಿನ ತೀರ್ಪನ್ನು ಹಿಂಪಡೆದ ಕಾರಣ ನೀಟ್ ಪರೀಕ್ಷೆಯು ಮತ್ತೆ ದೇಶದಾದ್ಯಂತ ಜಾರಿಗೆ ಬಂದಿತು.
ಈ ವಿಚಾರದಲ್ಲಿ ಕೇಂದ್ರ ಮೋದಿ ಸರ್ಕಾರವು NTA ಏಜೆನ್ಸಿ ಮೂಲಕ ಪರೀಕ್ಷೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟಿಗೆ ಭರವಸೆ ಕೊಟ್ಟ ಬಳಿಕ ನ್ಯಾಯಾಲಯ ತನ್ನ ಹಿಂದಿನ ತೀರ್ಪುನ್ನು ಹಿಂಪಡೆದು ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು ಎಂದು ಕಾರ್ಕಳ ಬಿಜೆಪಿ ವಕ್ತಾರರು ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟಿಗೆ ಮರುಪರೀಕ್ಷೆ ನಡೆಸುವ ಭರವಸೆ ನೀಡಿದ್ದು ಕೇಂದ್ರ ಮೋದಿ ಸರಕಾರ, ಆದರೆ ಈಗ ಅದು ಮೋದಿ ಸರ್ಕಾರದ ಹೊಣೆಗಾರಿಕೆ ಅಲ್ಲ ಎಂದು ಕಾರ್ಕಳ ಬಿಜೆಪಿ ನಾಯಕರ ಹೇಳಿಕೆಯು ತೀರಾ ಬಾಲಿಷವಾದುದಾಗಿದೆ.
2016 ರಿಂದ 2026 ರ ವರೆಗೆ ನಿರಂತರವಾಗಿ 10 ವರ್ಷಗಳ ಕಾಲ ಕೇಂದ್ರ ಮೋದಿ ಸರ್ಕಾರವೇ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ಮೂಲಕ ನೀಟ್ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ಅದೇ ನೀಟ್ ಪ್ರಶ್ನಾಪತ್ರಿಕೆ ಸೋರಿಕೆಯಾದಾಗ ಅದಕ್ಕೆ ಕಾಂಗ್ರೆಸ್ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿರುವುದು ತೀರಾ ನಾಚಿಕೆಗೇಡಿನ ವಿಚಾರ.
ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 22 ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೇಂದ್ರ ಶಿಕ್ಷಣ ಸಚಿವರ ತಲೆದಂಡಕ್ಕೆ ವಿದ್ಯಾರ್ಥಿಗಳು ಬೀದಿಗಿಳಿಯಬೇಕಾಯಿತು. ಇದು ಯಾವ ರೀತಿಯ ಆಡಳಿತ ಎನ್ನುವುದನ್ನು ಕಾರ್ಕಳ ಬಿಜೆಪಿ ನಾಯಕರು ಜನರ ಮುಂದಿಡಬೇಕು.
ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್,ನಲ್ಲಿ ನಡೆಸಿದ ಹೋರಾಟಕ್ಕೆ ಕೇಂದ್ರ ಸರ್ಕಾರವೇ ತಲೆಬಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆ ಪಡೆದಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ದೇಶಕ್ಕೆ ದೇಶವೇ ಬೆಂಬಲಿಸಿದೆ, ವಿದ್ಯಾರ್ಥಿಗಳು ತಮ್ಮ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಮಾಡಿದ ವಿದ್ಯಾರ್ಥಿಗಳ ವಿರುದ್ದ ದೇಶದ್ರೋಹಿ, ಸಮಾಜಘಾತುಕರು ಎನ್ನುವಂತೆ ಬಿಂಬಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶಾಸಕರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವುದು ಅಪಾಯಕಾರಿ. ಈ ಪ್ರತಿಭಟನೆ ಕೇವಲ ವಿದ್ಯಾರ್ಥಿಗಳ ವಿರುದ್ಧ ಮಾತ್ರ ಅಲ್ಲ, ಈ ಪ್ರತಿಭಟನೆಯು ಈ ದೇಶದ ಭವಿಷ್ಯದ ವಿರುದ್ಧವಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು ಸಂವಿಧಾನವು ನೀಡಿದೆ. ಉಡುಪಿ ಬಿಜೆಪಿಯ ಪ್ರತಿಭಟನೆಯು ಸಂವಿಧಾನದ ವಿರುದ್ಧ ಮತ್ತು ಭಾರತದ ಭವಿಷ್ಯದ ವಿರುದ್ಧದ ಪ್ರತಿಭಟನೆಯಾಗಿದೆ. ವಿದ್ಯಾರ್ಥಿಗಳ ವಿರೋಧಿ ಬಿಜೆಪಿಯ ನಿಲುವು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
