ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ದಿನವನ್ನು ಆಚರಿಸಲಾಯಿತು.
ಸಂಸ್ಕೃತ ಅಧ್ಯಾಪಕರಾದ ಶಂಕರ್ ನಾರಾಯಣ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಮೂಲ ಗುರುಗಳು ವೇದವ್ಯಾಸರು. ವೇದವ್ಯಾಸರು ಲೋಕಕ್ಕೆ ವೇದಗಳನ್ನು ಕ್ರೋಡಿಕರಿಸಿ ಗ್ರಂಥಗಳನ್ನು ಕೊಟ್ಟ ದಿನ. ಇದನ್ನು ಗುರುಪೂರ್ಣಿಮೆ ಎನ್ನುತ್ತೇವೆ. ನಾವು ಹೆಮ್ಮೆಯಿಂದ “ನಮ್ಮ ಭಾರತ” ಎನ್ನಲು, ಬುನಾದಿ ಆಗಿರುವುದು ವೇದಗಳು ಪುರಾಣಗಳು. ಈ ಸಿದ್ಧಾಂತವನ್ನು ಭೂಮಿಗೆ ಕೊಟ್ಟವರು ವ್ಯಾಸರು. ನಾವೆಲ್ಲಾ ಅಧ್ಯಯನ ಮಾಡಿ ಗುರುಗಳನ್ನು ಮರೆತು ಬಿಡುತ್ತೇವೆ. ತಂದೆ – ತಾಯಿ ಗುರುಗಳನ್ನು ಮರೆಯಬಾರದು. ನಮಗೆ ಜೀವನದಲ್ಲಿ ಗುರಿ ಮತ್ತು ಗುರು ಬೇಕು. ನಮಗೆ ಶ್ರೇಯಸ್ಸನ್ನು ಬಯಸುವ ತಂದೆ -ತಾಯಿ ಬಿಟ್ಟು ಮತ್ತೊಂದು ಜೀವ ಗುರುಗಳು. ತಿದ್ದುವ ಕಾಲದಲ್ಲಿ ವಿದ್ಯಾರ್ಥಿಗಳನ್ನು ತಿದ್ದಬೇಕು. ಶಿಕ್ಷೆ ಎನ್ನುವುದು ಶಿಕ್ಷಣ ಅಲ್ಲ, ಶಿಕ್ಷಣಕ್ಕಾಗಿ ಕೆಲವೊಂದು ಶಿಕ್ಷೆ ಬೇಕಾಗುತ್ತದೆ. ಗುರುವಿನ ಮಹತ್ವ ಅರಿತಾಗ ಶಿಷ್ಯತ್ವ ಸಿದ್ಧಿಯಾಗುತ್ತದೆ. ಗುರುಗಳಿಗೆ ಗೌರವ ಕೊಟ್ಟರೆ ನಾವು ದೇವರಿಗೆ ಗೌರವ ಕೊಟ್ಟಂತೆ. ಉಪಮನ್ಯುವಿನ ಕಥೆಯನ್ನು ಹೇಳಿ ಗುರು ಭಕ್ತಿಯ ಮಹತ್ವ ತಿಳಿಸಿದರು ಹಾಗೂ ವಿದ್ಯಾ ಸಂಸ್ಥೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಹೇಗೆ ಸಂಸ್ಕಾರ ಕೊಡುತ್ತಾರೆ ಎಂಬುವುದು ಮುಖ್ಯ. ಅದು ಈ ಸಂಸ್ಥೆಯಲ್ಲಿ ಇದೆ. ಕಲಿಕೆಯಲ್ಲಿ ತುಂಬಾ ಹಿಂದೆ ಇರುವ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಅವರು ಹೆಚ್ಚು ಅಂಕ ಗಳಿಸುವಂತೆ ಮಾಡುವುದು ಈ ಶಾಲೆ. ಒಳ್ಳೆಯ ರೀತಿಯಲ್ಲಿ ಸಹಕರಿಸುವ ಶಿಕ್ಷಕ ವೃಂದ ಇಲ್ಲಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ರವರು ನಿಮಗೆ ಒಳ್ಳೆಯ ಮಾಹಿತಿ ಸಿಕ್ಕಿದೆ. ಗುರುಗಳಿಗೆ ಗೌರವ ಕೊಡಿ. ಸಮಾಜದಲ್ಲಿ ಗುರುಗಳಿಗೆ ಒಳ್ಳೆಯ ಸ್ಥಾನ ಇದೆ. ಎಲ್ಲಾ ಶಿಕ್ಷಕರು ರಾಷ್ಟ್ರ ನಿರ್ಮಾಪಕರು ಎಂದರು.
ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಮಾತನಾಡಿ ವ್ಯಕ್ತಿಯಲ್ಲಿರುವ ವಿದ್ಯೆಗೆ, ಶ್ರೇಷ್ಠತೆಗೆ ನಮಸ್ಕರಿಸುವುದು ಅದೇ ಗುರು. ನಮಗೆ ಮಾರ್ಗದರ್ಶನ ಮಾಡುವವರೆಲ್ಲರೂ ಗುರುಗಳು. ಪ್ರತಿ ದಿವಸ ಗುರುಗಳಿಗೆ ಗೌರವ ಕೊಡಬೇಕು. ಗುರುಗಳು ಹೇಳಿದ್ದನ್ನು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ, ಅವರ ಪ್ರೀತಿಗೆ ಪಾತ್ರರಾಗುತ್ತೀರಿ. ಒಳ್ಳೆಯ ಶಿಷ್ಯರು ನೀವು ಆಗಿ. ವೇದವ್ಯಾಸರು ಜಗತ್ತಿಗೆ ಸಾರಿದ್ದನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಯಾದ ಪ್ರಣೀತ್ ರವರು ಉಪಸ್ಥಿತರಿದ್ದರು.
ಶಿಕ್ಷಕಿಯಾದ ಶ್ರೀಮತಿ ಕಾಂತಿ ಮತ್ತು ಶ್ರೀಮತಿ ಶಮ್ಯರವರು ನಿರ್ವಹಿಸಿದರು.
