ದೇಶದ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಕೇಸರಿ ಬಿಳಿ ಹಸಿರು ತ್ರಿವರ್ಣ ವಿದ್ಯುತ್ ದೀಪಾಲಂಕಾರ ಹಾಗೂ ಮಂಗಳವಾದ್ಯ ಕಾರ್ಯಕ್ರಮ ಆಗಸ್ಟ್ 15ರಂದು ನಡೆಯಲಿದೆ ಎಂದು ಜೈನಕಾಶಿ ಟ್ರಸ್ಟ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಅಂದು ಸಂಜೆ ಗಂಟೆ 7ರಿಂದ 8.30ರವರೆಗೆ ಮಂಗಳವಾದ್ಯ ಕಾರ್ಯಕ್ರಮದೊಂದಿಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ. ಸಾರ್ವಜನಿಕರಿಗೆ ದೀಪಾಲಂಕಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿನಮಂದಿರದ ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡು ದರ್ಶನ ಪಡೆಯುವಂತೆ ಜೈನ ಕಾಶಿ ಟ್ರಸ್ಟ್ ಮನವಿ ಮಾಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾವಿರ ಕಂಬಗಳ ಬಸದಿ ಸೇರಿದಂತೆ ಮೂಡುಬಿದಿರೆಯ 18ಬಸದಿಗಳಲ್ಲಿ ಅಳವಡಿಸಿರುವ ದೀಪಾಲಂಕಾರವನ್ನು ಸಾರ್ವಜನಿಕರು ಹಾಗೂ ಮೂಡುಬಿದಿರೆಗೆ ಭೇಟಿ ನೀಡುವವರು ವೀಕ್ಷಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆಯ ಬಳಿಕ ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ದೀಪಾಲಂಕಾರ ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ಆಗಸ್ಟ್ 15ರ ಕಾರ್ಯಕ್ರಮಕ್ಕೆ ಡಾ. ಮೋಹನ ಆಳ್ವರ ಸಹಕಾರದಲ್ಲಿ ವಯಲಿನ್ ಹಾಗೂ ಕೊಳಲು ವಾದನ ಸೇರಿದಂತೆ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಮೂಡುಬಿದಿರೆಯ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪಾಲಂಕಾರ ವೀಕ್ಷಿಸುವಾಗಬೇಕು.
ಮೂಡುಬಿದಿರೆಯ 18 ಬಸದಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪರಂಪರೆಯಿಂದ ಬಂದಿರುವ ಟ್ರಸ್ಟಿಗಳ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಬಸದಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಬಲಪಡಿಸುವ ಉದ್ದೇಶದಿಂದ ಜೈನ ಕಾಶಿ ಟ್ರಸ್ಟ್ ರಚಿಸಲಾಗಿದೆ. ಟ್ರಸ್ಟ್‌ನಲ್ಲಿ ಪಟ್ಟಣಶೆಟ್ಟ ಸುದೇಶ್ ಕುಮಾರ್ , ಸುಧೀಶ್ ಕುಮಾರ್ ಹಾಗೂ ಚೌಟರ ಅರಮನೆ ಆದರ್ಶ್ ಸೇರಿದಂತೆ ನಾಲ್ವರು ಟ್ರಸ್ಟಿಗಳಿದ್ದು, ಚಾರುಕೀರ್ತಿ ಸ್ವಾಮೀಜಿಯವರು ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ.
ಟ್ರಸ್ಟ್‌ಗೆ ಸಲಹಾ ಸಮಿತಿಯನ್ನೂ ರಚಿಸಲಾಗಿದೆ ಎಂದರು.
ಜೈನ ಕಾಶಿ ಟ್ರಸ್ಟ್ ಟ್ರಸ್ಟಿಗಳಾದ ಪಟ್ಣಶೆಟ್ಟ ಸುದೇಶ್ ಕುಮಾರ್ , ಸುಧೀಶ್ ಕುಮಾರ್, ಸಲಹಾ ಸಮಿತಿ ಸದಸ್ಯ ಕೃಷ್ಣರಾಜ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.
