ಕಾರ್ಕಳ

“ಕರ್ನಾಟಕ ಸರಕಾರದ ಅವೈಜ್ಞಾನಿಕ ಮತ್ತು ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ನೀತಿಯಿಂದಾಗಿ ಕಾರ್ಕಳ ನಗರ ದುರ್ನಾತದತ್ತ’: ರವೀಂದ್ರ ಮೊಯ್ಲಿ

ರಾಜ್ಯ ಸರಕಾರ ದಿನಾಂಕ 07-05-2026 ರಂದು ಸಂಖ್ಯೆ 2117604/ಪೌನಿ/ಘವನಿ/ಸಿಸಿ/1/2026ರಂತೆ ಒಂದು ಸುತ್ತೋಲೆ ಹೊರಡಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು 2026ರಂದು ಅನುಷ್ಠಾನಗೊಳಿಸುವ ಬಗ್ಗೆ ಒಂದು ಸುತ್ತೋಲೆಯನ್ನು ಹೊರಡಿಸಿದ್ದು, ಸದ್ರಿ ಸುತ್ತೋಲೆಯಲ್ಲಿ ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯ ಸಿವಿಲ್ ಅಪೀಲ್ ನಂಬ್ರ 6174/2023 ರಲ್ಲಿ ದಿನಾಂಕ 19-02-2026, 29-04-2026, 05-05-2026 ರ ಆದೇಶಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸದ್ರಿ ಮಾರ್ಗಸೂಚಿಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯ ಮಾಡಿರುವ ಆದೇಶದ ಎಲ್ಲಾ ಅಂಶಗಳನ್ನು ಹಾಗೂ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2026 ರಲ್ಲಿ ನಮೂದಿಸಿರುವ ನಿಯಮಗಳ ಜಾರಿಯನ್ನು ಅಸಮರ್ಪಕ ರೀತಿಯಲ್ಲಿ ಜಾರಿ ಮಾಡಿಸಲು ಪ್ರಯತ್ನಿಸಿರುವ ಫಲವಾಗಿ ಕಾರ್ಕಳ ಪುರಸಭಾ ನಗರ ವ್ಯಾಪ್ತಿಯಲ್ಲಿರುವ ವಾಸ್ತವ್ಯದ ಮನೆ, ವ್ಯಾಪಾರ ವ್ಯವಹಾರ ಮಳಿಗೆಗಳಿಂದ ಉತ್ಪತ್ತಿಯಾಗುವ ಕಸ ಸಮರ್ಪಕವಾಗಿ ವಿಲೇವಾರಿಯಾಗದೇ ರಸ್ತೆಯ ಬದಿಯಲ್ಲಿ ಶೇಖರಣೆಯಾಗಿ ಗಬ್ಬುನಾತ ಬೀರುವ ಸ್ಥಿತಿ ಉಂಟಾಗಿದೆ. ಕಾರ್ಕಳ ಪುರಸಭೆಯು ಕಸ ವಿಲೇವಾರಿ ಬಗ್ಗೆ ನಿಗಧಿತ ಶುಲ್ಕವನ್ನು ಮನೆ ತೆರಿಗೆ ಯಾ ವ್ಯಾಪಾರ ತೆರಿಗೆಯನ್ನು 5% ರಿಬೇಟ್ ನೀಡುತ್ತೇವೆ ಎನ್ನುವ ಭರವಸೆಯೊಂದಿಗೆ ಮುಂಗಡವಾಗಿ ಸ್ವೀಕರಿಸುವ ಸಂಧರ್ಭದಲ್ಲಿಯೇ ಸಂಪೂರ್ಣವಾಗಿ ಪಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಸೇವೆಯನ್ನು ಒದಗಿಸುವ ಜವಾಬ್ದಾರಿ ಪುರಸಭೆಗೆ ಇರುತ್ತದೆ. ಆದರೇ ಕಾರ್ಕಳ ಪುರಸಭೆ ಕಸ ವಿಲೇವಾರಿಯಲ್ಲಿ ಅನುಸರಿಸಬೇಕಾದ ವಿಂಗಡಣೆಗಳಾದ ಹಸಿ ತ್ಯಾಜ್ಯ ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೇಷಲ್ ಕ್ಯಾರ್ ತ್ಯಾಜ್ಯ ವಿಂಗಡಣೆಯ ಸಂಪೂರ್ಣ ಜವಾಬ್ದಾರಿಯನ್ನು ನಾಗರೀಕರ ಮೇಲೆ ಹೊರೆಸಿ ತನ್ನ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುತ್ತಿದೆ. ಇದರಿಂದ ಕಸ ವಿಲೇವಾರಿಯಾಗದೇ ಜನ ತೊಂದರೆ ಪಡುತ್ತಿದ್ದಾರೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಮೇಲೆ ಉಲ್ಲೇಖಿತ ಪ್ರಕರಣದಲ್ಲಿ ಮಾಡಿರುವ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿರುವ ವಿಷಯಗಳು ಹಾಗೂ ಘನ ವಸ್ತುಗಳ ನಿರ್ವಹಣೆ ನಿಯಮಗಳು ೨೦೨೬ ರಲ್ಲಿ ನಿರ್ವಹಿಸಬೇಕಾದ ಮಾನದಂಡ ಹಾಗೂ ನಿಯಮಗಳನ್ನು ಪುರಸಭೆ ಸಂಪೂರ್ಣವಾಗಿ ನಿರ್ಲಕ್ಷಿಸಿ ಜನ ಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಈಗಾಗಲೇ ಕಸ ವಿಲೇವಾರಿ ಘಟಕದಲ್ಲಿ ಆಗಿರುವ ಅಗ್ನಿ ಅವಘಡದ ನೆಪದಲ್ಲಿ ಸದ್ರಿ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಕಾರ್ಕಳ ಪೇಟೆಯಲ್ಲಿ ಅಲ್ಲಲ್ಲಿ ಕಸ ತುಂಬಿ ಹೋಗಿದ್ದು, ಬೀದಿನಾಯಿಗಳು ಅದನ್ನು ಎಳೆದು ರಸ್ತೆಗೆ ಹಾಕುತ್ತಿರುವುದರಿಂದ ಪರಿಸರದಲ್ಲಿ ದುರ್ನಾತ ಉಂಟಾಗಿ ರೋಗ ರುಜಿನಗಳು ಹರಡುವ ಸಾದ್ಯತೆ ಇರುತ್ತದೆ.

ಕಾರ್ಕಳ ಪುರಸಭೆಯ ಸದ್ಯದ ಪರಿಸ್ಥಿತಿಯೂ ಕಾಂಗ್ರೇಸ್ ನೇತೃತ್ವದ ಕರ್ನಾಟಕ ಸರಕಾರದ ಆಡಳಿತವನ್ನು ಪ್ರತಿಫಲಿಸುತ್ತದೆ. ಜನರ ಈ ಸಮಸ್ಯೆಯ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಹಾಗೂ ಕಾರ್ಕಳ ಪುರಸಭೆಯ ಆಡಳಿತಾಧಿಕಾರಿಯವರಾದ ಕುಂದಾಪುರ ಉಪವಿಭಾಗಧಿಕಾರಿಯವರು ಕೂಡಲೇ ಸ್ವಂದಿಸಿ ಕಸ ವಿಲೇವಾರಿ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಆಗ್ರಹಿಸುತ್ತೇವೆ. ತಪ್ಪಿದಲ್ಲಿ ಜನಸಾಮಾನ್ಯರ ಸಂವಿದಾನಬದ್ದ ಹಕ್ಕಿನ ರಕ್ಷಣೆಗೆ ಪುರಸಭೆಯ ಮುಂಭಾಗದಲ್ಲಿ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರರಾದ ರವೀಂದ್ರ ಮೊಯ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯಲ್ಲಿ ಶಾಲಾ ಸಮವಸ್ತ್ರ ವಿತರಣೆ

Madhyama Bimba

ಕೆರೆಬೆಟ್ಟು ಶಾಲೆಯಲ್ಲಿ ನೋಟ್ಸ್ ಪುಸ್ತಕ ವಿತರಣೆ

Madhyama Bimba

ಜನಮೆಚ್ಚುಗೆಯತ್ತ ಕನ್ನಡ ಚಿತ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More