*ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ ಮಾಡಿದೆ
ಇತ್ತೀಚೆಗೆ ದೇಶದ ರಾಜಕೀಯ ವಲಯದಲ್ಲಿ ಹಗರಣಗಳ ಆರೋಪಗಳನ್ನು ಹೊತ್ತವರು ರಾಜಿನಾಮೆ ನೀಡುವ ಬೆಳವಣಿಗೆ ನಡೆಯುತ್ತಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷಾ ಅಕ್ರಮದ ಕಾರಣ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಹಗರಣದ ಆರೋಪ ಬಂದ ಕಾರಣ ಸಚಿವ ನಾಗೇಂದ್ರ ಅವರು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿರುತ್ತಾರೆ.
ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿದ ಪ್ರತಿಪಕ್ಷ ಬಿಜೆಪಿಯಲ್ಲಿ ಬಹುದೊಡ್ಡ ಹಗರಣದ ಆರೋಪ ಹೊತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಶಾಸಕರಾಗಿದ್ದು ಅವರ ರಾಜಿನಾಮೆ ಯಾವಾಗ ಎಂದು ಕಾರ್ಕಳದ ಜನತೆಯ ಪರವಾಗಿ ನಾವು ಕೇಳುತ್ತಿದ್ದೇವೆ. ಮತ್ತು ನಾಗೇಂದ್ರ ರಾಜೀನಾಮೆ ಆಗ್ರಹಿಸುತ್ತಿದ್ದ ಕಾರ್ಕಳ ಶಾಸಕರು ವಿಧಾನ ಸಭೆಯಲ್ಲಿ ಪರಶುರಾಮನ ಪ್ರತಿಮೆ ಪುನಃ ನಿರ್ಮಾಣದ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯ ಉಂಟು ಮಾಡಿದೆ ತಪ್ಪು ಮಾಡಿದವನಿಗೆ ಆತ್ಮಸಾಕ್ಷಿಯ ಅಡ್ಡ ಬಂದಿರಬೇಕು.
ಕಾರ್ಕಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇನೆಂದು ಜನರ ತೆರಿಗೆ ಹಣದಿಂದ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿದ್ದೇನೆಂದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರತಿಮೆಯನ್ನು ಸುನೀಲ್ ಕುಮಾರ್ ಉದ್ಘಾಟನೆ ಮಾಡಿಸಿದ್ದು ನಂತರ ಆ ಪ್ರತಿಮೆಯೇ ನಕಲಿ ಎಂದು ಜಗಜ್ಜಾಹಿರಾಗಿದ್ದು ಈಗ ಎಲ್ಲರಿಗೂ ತಿಳಿದಿರುವ ಸತ್ಯ. ಧರ್ಮದ ಹೆಸರಿನಲ್ಲಿ ಇಷ್ಟು ದೊಡ್ಡ ಮಟ್ಟದ ಮೋಸ ಅನಾಚಾರ ಮಾಡಿದವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಲ್ಲವೆ…?
ಈ ಪ್ರಕರಣವನ್ನು ತನಿಖೆ ನಡೆಸಿದ ಪೋಲಿಸರು ಕಾಲಂ 420, 409, 201,120B ವಂಚನೆ, ನಂಬಿಕೆ ದ್ರೋಹ, ಸಾಕ್ಷಿನಾಶ, ಮತ್ತು ಒಳಸಂಚು ಎನ್ನುವ ಗಂಭೀರ ಆರೋಪವನ್ನು ತಮ್ಮ ದೋಷಾರೋಪ ಪಟ್ಟಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರತಿಮೆ ನಿರ್ಮಿಸಿದ ಶಿಲ್ಪಿ, ಮತ್ತು ಇಂಜಿನಿಯರ್ ಮೇಲೆ ಇಷ್ಟು ದೊಡ್ಡ ಗುರುತರವಾದ ಆರೋಪ ದಾಖಲಾಗಿದ್ದು ಈಗಾಗಲೇ ಶಿಲ್ಪಿಯ ಬಂಧನವಾಗಿ ಜೈಲುವಾಸವೂ ಆಗಿರುತ್ತದೆ. ಪ್ರತಿಮೆ ನಿರ್ಮಿಸಿದ ಶಿಲ್ಪಿ, ಇಂಜಿನಿಯರ್ ಆರೋಪವನ್ನು ಹೊತ್ತಿರುವಾಗ ಈ ಯೋಜನೆಯ ರೂವಾರಿಯಾಗಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೂಡ ಅಷ್ಟೇ ಜವಾಬ್ದಾರರಲ್ಲವೇ? ಇದರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಾಗಿರುವುದು ಅವರ ಜವಾಬ್ದಾರಿಯಾಗಿರುತ್ತದೆ. ಅತ್ಮಸಾಕ್ಷಿ ಇದ್ದರೆ ಇಷ್ಟು ದೊಡ್ಡ ಆರೋಪವನ್ನು ಹೊತ್ತು ಇನ್ನೂ ಅಧಿಕಾರದಲ್ಲಿ ಮುಂದುವರಿಯುವುದು ಎಷ್ಟು ಸರಿ..?
ಪರಶುರಾಮ ಪ್ರತಿಮೆಯ ಎರಡು ಕಾಲು ಮತ್ತು ಅರ್ಧ ಭಾಗ ಬೆಟ್ಟದ ಮೇಲೆ ಇದ್ದರೂ ಇನ್ನೂ ಎರಡು ಕಾಲು ಮತ್ತು ಇಡೀ ದೇಹದ ಭಾಗ ಕಾರ್ಕಳ ಪೋಲಿಸ್ ಠಾಣೆಯಲ್ಲಿರುವುದು ಈ ಪ್ರಕರಣದಲ್ಲಿ ನಡೆದ ಮೋಸಕ್ಕೆ ಸಾಕ್ಷಿಯಾಗಿದೆ.
ಆ ಕಾರಣಕ್ಕಾಗಿ ಅವರು ರಾಜೀನಾಮೆಯನ್ನು ನೀಡುವಂತೆ ಒತ್ತಾಯಿಸುತ್ತೇವೆ ಮತ್ತು ಮುಂದೆ ಹೊಸ ರೂಪದ ಹೋರಾಟಕ್ಕೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಮಾಧ್ಯಮ ಗೋಷ್ಠಿಯಲ್ಲಿ ಶುಭದ ರಾವ್ಅ ಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ.ಅಜಿತ್ ಹೆಗ್ಡೆ ಅಧ್ಯಕ್ಷರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ,
ಅನಿಲ್ ಪೂಜಾರಿ ಮಾಳ ಅಧ್ಯಕ್ಷರು ಬ್ಲಾಕ್ ಪ್ರಚಾರ ಸಮಿತಿ, ರಾಜೇಂದ್ರ ದೇವಾಡಿಗ ಅಧ್ಯಕ್ಷರು ನಗರ ಕಾಂಗ್ರೆಸ್ ಸಮಿತಿ, ಪ್ರದೀಪ್ ಬೇಲಾಡಿ ವಕ್ತಾರರು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಸ್ಥಿತರಿದ್ದರು
