ಕಾರ್ಕಳ

ಕಾರ್ಕಳ: ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ

ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಮಹತ್ವವನ್ನು ಬಾಲ್ಯದಿಂದಲೇ ಅರಿತುಕೊಳ್ಳಬೇಕು. ಕಾಡು, ವನ್ಯಜೀವಿ ಹಾಗೂ ಪರಿಸರ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಅವುಗಳ ಸಂರಕ್ಷಣೆಯಿಂದ ಮಾತ್ರ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಸಾಧ್ಯ ಎಂದು ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಹೇಳಿದರು.

ಕುದುರೆಮುಖ -ಕಾರ್ಕಳ ವನ್ಯಜೀವಿ ವಿಭಾಗದ ವತಿಯಿಂದ ‘ಆವಾಸಸ್ಥಾನಗಳ ಸಂಪರ್ಕ, ಸಮೃದ್ಧಿ-ವನ್ಯಜೀವಿ ಆಶಯ’ದಡಿ ಅ.೨ರಿಂದ ೮ರವರೆಗೆ ಆಯೋಜಿಸಿದ್ದ ವಿವಿಧ ಜಾಗೃತಿ, ಪ್ರಚಾರ ಹಾಗೂ ಸಮುದಾಯ ಸಹಭಾಗಿತ್ವ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೆರ್ವಾಜೆ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡು ಉಳಿದರೆ ನೀರು, ಗಾಳಿ, ಮಣ್ಣು ಸೇರಿದಂತೆ ಜೀವಜಾಲವೂ ಉಳಿಯುತ್ತದೆ. ಪ್ರತಿಯೊಂದು ಜೀವಿಗೂ ಪರಿಸರ ವ್ಯವಸ್ಥೆಯಲ್ಲಿ ತನ್ನದೇ ಆದ ಪಾತ್ರವಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಶಾಲಾ ಹಂತದಿಂದಲೇ ಬೆಳೆಸಬೇಕಿದ್ದು, ಇಂಥ ಕಾರ್ಯಕ್ರಮಕ್ಕೆ ಮಕ್ಕಳನ್ನು ಕೇಂದ್ರಿಕೃತವಾಗಿಸಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಡಿಎಫ್‌ಒ ರವಿಶಂಕರ್ ಐಎಫ್‌ಎಸ್ ಮಾತನಾಡಿ, ಪಠ್ಯ ಶಿಕ್ಷಣದ ಜತೆಗೆ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದರು. ಸುತ್ತಮುತ್ತಲಿನ ಪಕ್ಷಿ, ಚಿಟ್ಟೆ ಹಾಗೂ ಸಸ್ಯ ಪ್ರಭೇದಗಳನ್ನು ಗುರುತಿಸುವಂತಹ ಚಟುವಟಿಕೆಗಳು ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಹಾಗೂ ಸಂರಕ್ಷಣೆಯ ಜವಾಬ್ದಾರಿ ಬೆಳೆಸುತ್ತವೆ ಎಂದರು.

ಅರಣ್ಯ ಇಲಾಖೆಯ ಡಿಎಫ್‌ಒ ಪ್ರವೀಣ್ ಕುಮಾರ್ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವೀಣಾ ರಾಜೇಶ್, ಶ್ರೀ ಭುವನೇಂದ್ರ ರೆಸಿಡನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವೀಣಾ ಶೆಣೈ, ಸಿದ್ಧಾಪುರ ವಲಯ ಎಸಿಎಫ್ ಜಿ.ಡಿ. ದಿನೇಶ್ ಉಪಸ್ಥಿತರಿದ್ದರು.

ಕುದುರೆಮುಖ ವನ್ಯಜೀವಿ ವಿಭಾಗದ ಎಸಿಎಫ್ ಲತಾ ಗುರು ಭಟ್ಟ ಪ್ರಸ್ತಾವನೆಗೈದು, ವನ್ಯಜೀವಿ ಸಪ್ತಾಹದ ಉದ್ದೇಶ ವನ್ಯಜೀವಿ ಆವಾಸಸ್ಥಾನಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ನಮ್ಮಲ್ಲಿರುವ ಅಮೂಲ್ಯ ಅರಣ್ಯ ಸಂಪತ್ತು, ವೈವಿಧ್ಯಮಯ ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಗೌರವಿಸಲಾಯಿತು. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ, ರಸಪ್ರಶ್ನೆ, ಮರ, ಪ್ರಾಣಿಗಳನ್ನು ಗುರುತಿಸುವ ಸ್ಪರ್ಧೆ ಆಯೋಜಿಸಿ ಪ್ರಶಸ್ತಿ ನೀಡಲಾಯಿತು.

ಕುದುರೆಮುಖ ಕಾರ್ಕಳ ವಲಯದ ಆರ್‌ಎಫ್‌ಒ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿದರು, ಇಲಾಖೆ ಸಿಬಂದಿ ವಿನುತಾ ನಿರೂಪಿಸಿದರು.

Related posts

ಬೈಲೂರು ನಚಿಕೇತ ವಿದ್ಯಾಲಯದಲ್ಲಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ

Madhyama Bimba

ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ಸರ್ಕಾರದ ನಿರ್ಧಾರ, ಈ ವಿಚಾರವನ್ನು ಬಿಜೆಪಿ ಸುಖಾಸುಮ್ಮನೇ ರಾಜಕೀಯಗೊಳಿಸುತ್ತಿದೆ

Madhyama Bimba

ಹೆಬ್ರಿ ಎಸ್.ಆರ್ ಸಂಸ್ಥೆಯಲ್ಲಿ ಕರಾಟೆ ಪರೀಕ್ಷೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More