ಕಾಂತಾವರ : ಕಳೆದ 48 ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯವಾಗಿದೆ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ ಕಾಸರಗೋಡು ಕನ್ನಡಿಗರಿಗೆ ಇದು ಸಂಭ್ರಮಿಸುವ ದಿನವಲ್ಲವಾದರೂ ಇಂದಿಗೂ ಕಾಸರಗೋಡಿನ ಕನ್ನಡಿಗರು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘದಲ್ಲಿ ನಡೆದ ‘ಕಾಂತಾವರ ಉತ್ಸವ ? 2024’ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಭಾಧ್ಯಕ್ಷತೆಯನ್ನು ವಹಿಸಿ ಏಳು ಜನ ಸಾಧಕರಿಗೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನಿಸಿ ಸರಕಾರದ ಧೋರಣೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಹಿರಿಯ ಲೇಖಕಿ ಹಾಗೂ ಸಂಘಟಕರಾಗಿರುವ ಪ್ರೊ. ಪ್ರಮೀಳಾ ಮಾಧವ್ ಕಾಸರಗೋಡು ಅವರು ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಂಸನೆ ಸಲ್ಲಿಸಿದರು.
“ನಾಡಿಗೆ ನಮಸ್ಕಾರ ಗ್ರಂಥಮಾಲೆ”ಯ ಸಂಪಾದಕರಾಗಿರುವ ಹಿರಿಯ ವಿಮರ್ಶಕರು ಹಾಗೂ ಕಾದಂಬರಿಕಾರರಾದ ಡಾ. ಬಿ.ಜನಾರ್ದನ ಭಟ್ ಅವರು ಮಾಲೆಯಲ್ಲಿ ಮೂಡಿಬರುತ್ತಿರುವ ಕೃತಿಗಳ ಮಹತ್ವವನ್ನು ತಿಳಿಸಿದರು.
ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕರಾಗಿರುವ ಪ್ರೊ. ಪಿ.ಎನ್.ಮೂಡಿತ್ತಾಯರವರು ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಎಂಟು ಕೃತಿಗಳು ಮತ್ತು ಸಂಸ್ಕೃತಿ ಸಂವರ್ಧನ ಮಾಲೆಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿ, ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಯುವ ಈ ಮಹತ್ವದ ಕೃತಿಗಳ ಪ್ರಕಟಣೆ ಈಗ ೩೫೪ನ್ನು ದಾಟಿದ್ದು ಇದು ನಾಡೇ ಬೆರಗಾಗುವಂತಹ ಕನ್ನಡ ಸಂಘದ ಮಹತ್ಸಾಧನೆಯಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಬಂದ ಸಾಧಕರು, ಕೃತಿಯ ಲೇಖಕರು ಮತ್ತು ಪ್ರಾಯೋಜಕರು ಹಾಗೂ ದತ್ತಿನಿಧಿಗಳ ಪ್ರಾಯೋಜಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಮುಂಜಾನೆ ಕನ್ನಡ ಸಂಘದ ಉಪಾಧ್ಯಕ್ಷರಾದ ಸತೀಶ ಕುಮಾರ್ ಕೆಮ್ಮಣ್ಣು ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ನೆರವೇರಿತು. ಚಾಟುಕವಿ ವಿರಚಿತ ಕರ್ನಾಟಕ ಭಾಗವತದ ‘ಮಹಾಬಲಿ’ ಪ್ರಸಂಗದ ವಾಚನವನ್ನು ಯಜ್ಞೇಶ್ ಆಚಾರ್ಯ ಹೊಸಬೆಟ್ಟು ನಿರ್ವಹಿಸಿದರೆ ಸರ್ಪಂಗಳ ಈಶ್ವರ ಭಟ್ ಅವರು ವ್ಯಾಖ್ಯಾನಿಸಿದರು.
ಪ್ರಶಸ್ತಿ ಪುರಸ್ಕೃತರು
೧. ಕರ್ನಾಟಕ ಏಕೀಕರಣ ನೇತಾರ ಕೆ.ಬಿ.ಜಿನರಾಜ ಹೆಗ್ಡೆಯವರ ಸುಪುತ್ರಿ ಸರಸ್ವತಿ ಬಲ್ಲಾಳ್ ಮತ್ತು ಅವರ ಪತಿ ಡಾ. ಸಿ.ಕೆ.ಬಲ್ಲಾಳ್ ಅವರ ದತ್ತಿನಿಧಿಯ ‘ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ’ಯನ್ನು ಬಂಟ್ವಾಳದ “ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ”ದ ಸಂಸ್ಥಾಪಕರಾದ ಪ್ರೊ. ತುಕಾರಾಮ ಪೂಜಾರಿಯವರಿಗೆ.
೨. ಭಾಷಾತಜ್ಞ ದಿ| ಡಾ.ಯು.ಪಿ.ಉಪಾಧ್ಯಾಯ ಅವರ ಹೆಸರಿನ “ಮಹೋಪಾಧ್ಯಾಯ ಪ್ರಶಸ್ತಿ”ಯನ್ನು ಡಾ. ವರದರಾಜ ಚಂದ್ರಗಿರಿಯವರಿಗೆ.
೩. ಧಾರವಾಡದ ಹಿರಿಯ ಸಾಹಿತಿ ಡಾ. ಜಿ.ಎಂ.ಹೆಗಡೆ ಅವರ ದತ್ತಿನಿಧಿಯ “ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ”ಯನ್ನು ಪ್ರೊ. ಯು.ಮಹೇಶ್ವರಿ ಅವರಿಗೆ.
೪. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರ ದತ್ತಿನಿಧಿಯಿಂದ ಕೊಡಲ್ಪಡುವ “ಮಂಜನಬೈಲ್ ರಂಗಸನ್ಮಾನ್ ಪ್ರಶಸ್ತಿ”ಯನ್ನು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಬೆಳಗಾವಿಯ ಡಾ. ಅರವಿಂದ ಕುಲಕರ್ಣಿಯವರಿಗೆ.
೫. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ವಾಣಿ. ಬಿ.ಆಚಾರ್ ಅವರ ದತ್ತಿನಿಧಿಯ ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ”ಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿಠಲ ಬೇಲಾಡಿ ಅವರಿಗೆ.
೬. ಮೊಗಸಾಲೆ ಕುಟುಂಬದ ದತ್ತಿನಿಧಿಯಿಂದ ನೀಡುವ ‘ಕಾಂತಾವರ ಸಾಹಿತ್ಯ ಪ್ರಶಸ್ತಿ’ಯನ್ನು ಡಾ. ಪ್ರಭಾಕರ ಶಿಶಿಲ ಅವರಿಗೆ.
೭. ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ ‘ಕಾಂತಾವರ ಅನುವಾದ ಸಾಹಿತ್ಯ ಪ್ರಶಸ್ತಿ’ಯನ್ನು ಡಾ. ಪಾರ್ವತಿ ಜಿ.ಐತಾಳ್ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ ಹತ್ತು ಸಾವಿರ ರೂಪಾಯಿಗಳ ಗೌರವ ಸಂಭಾವನೆ, ತಾಮ್ರಪತ್ರ ಹಾಗೂ ಸನ್ಮಾನವನ್ನೊಳಗೊಂಡಿದೆ.
‘ನಾಡಿಗೆ ನಮಸ್ಕಾರ’ದಲ್ಲಿ ಅನಾವರಣಗೊಂಡ ನೂತನ ಹೊತ್ತಗೆಗಳು
೧. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯ (ಲೇ: ಡಾ. ನವೀನ್ ಕುಮಾರ್ ಮರಿಕೆ) ೨. ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್ (ಲೇ : ವಿರಾಜ್ ಅಡೂರು) ೩. ಹಿರಿಯ ಮಕ್ಕಳ ಕವಿ, ಸಮಾಜ ಮಿತ್ರ, ಶಿಕ್ಷಕ ಸೂಡ ಸದಾನಂದ ಶೆಣೈ (ಲೇ : ಸಚ್ಚಿದಾನಂದ ಶೆಣೈ) ೪. ಪಂಡಿತ ಪರಂಪರೆಯ ಗುರು, ಸಾಹಿತಿ ವಿದ್ವಾನ್ ಜೇಂಕಳ ಶ್ರೀನಿವಾಸ ಭಟ್ (ಲೇ : ಶ್ರೀಮತಿ ಜ್ಯೋತಿ ಮಹಾದೇವ್) ೫. ಸಾಹಿತ್ಯ ಶಿಕ್ಷಣ ಸಂಪನ್ನೆ ಶ್ರೀಮತಿ ಸಾವಿತ್ರಿ ಎಸ್. ರಾವ್ (ಲೇ : ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ) ೬) ಕಲಾ ತಪಸ್ವಿ ಬಿ. ಗಣೇಶ ಸೋಮಯಾಜಿ (ಲೇ : ಪ್ರೊ| ಅನಂತ ಪದ್ಮನಾಭ ರಾವ್) ೭. ಪ್ರಸಿದ್ಧ ವಿಮರ್ಶಕಿ ಮತ್ತು ಅನುವಾದಕಿ ಪ್ರೊ| ಪಾರ್ವತಿ ಜಿ. ಐತಾಳ್ (ಲೇ: ನರೇಂದ್ರ ಎಸ್. ಗಂಗೊಳ್ಳಿ) ೮. ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ್ ನಾಯಕ್ (ಲೇ: ರಾಧಾಕೃಷ್ಣ ಉಳಿಯತ್ತಡ್ಕ) ೯. ಹಾಸ್ಯ ಸಾಹಿತ್ಯದ (ನಿ)ರೂಪಕ ವೈ ಸತ್ಯನಾರಾಯಣ ಕಾಸರಗೋಡು (ಲೇ: ರಾಧಾಕೃಷ್ಣ ಉಳಿಯತ್ತಡ್ಕ) (ಸಂಸ್ಕೃತಿ ಸಂವರ್ಧನ ಮಾಲೆಯಲ್ಲಿ ಪ್ರಕಟಗೊಂಡ ಕೃತಿ)
ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ೨೦೨೪ ನೆಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ. ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದರಾದ ಬ್ರಜೇಶ್ ಚೌಟ ಹಾಗೂ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ ರಶ್ಮಿತಾ ಜೈನ್ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ತಮ್ಮ ಪತಿ ಯುವರಾಜ್ ಜೈನ್ ಅವರ ಜೊತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ ಒಟ್ಟು ೩೦೦೦ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆಯ ಮೂಲಕ ಈವರೆಗೆ ಹೊರಹೋದ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್‌ಗಳಾಗಿ ವಿಜ್ಞಾನಿಗಳಾಗಿ, ಅಧ್ಯಾಪಕರಾಗಿ, ಆರ್ಥಿಕ ವಲಯದ ಅನೇಕ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿ ಯೋಗ್ಯ ಪ್ರಜೆಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ರಶ್ಮಿತಾ ಅವರು ತಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಗುರುಕುಲ ಮಾದರಿಯ ಜೀವನಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಯೋಗ, ಧ್ಯಾನ, ಭಜನೆ ಮೊದಲಾದುವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಾರೆ. ಗುರುಹಿರಿಯರು, ತಂದೆ-ತಾಯಿಗಳ ಬಗೆಗೆ ಗೌರವ, ರಾಷ್ಟ್ರೀಯತೆ, ಸಾಮಾಜಿಕ ಸನ್ನಡತೆ, ಭಾರತೀಯ ಸನಾತನ ಸಂಸ್ಕೃತಿಯ ಬಗೆಗೆ ಆದರಭಾವವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ್ಯ ತರಬೇತಿಯನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ. ಸಂಸ್ಥೆಯ ಮೂಲಕ ಮೂಡುಬಿದಿರೆ ಪರಿಸರದ ಜೇಸಿ, ರೋಟರಿ, ಜೈನ್ ಮಿಲನ್ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಅನೇಕ ಪರಿಸರ ಸಂಬಂಧಿ ಹಾಗೂ ಸಾಮಾಜಿಕ ಸೇವಾ ಕಾರ್‍ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಅತ್ಯಂತ ಪ್ರಿಯವಾದ ‘ಸಸ್ಯಶ್ಯಾಮಲ’ ಕಾರ್‍ಯಕ್ರಮ ಎಲ್ಲರಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಒಂದುಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಸಂಸ್ಥೆಯ ಆವರಣದಲ್ಲಿ ಹಸಿರು ಉಸಿರಾಡುವಂತೆ ಮಾಡಿ ಮಕ್ಕಳಿಗೆಪರಿಸರ ಪ್ರೀತಿಯನ್ನುಂಟು ಮಾಡಿದ್ದಾರೆ. ಮೂಡುಬಿದಿರೆ ಪರಿಸರದಲ್ಲಿ ನಡೆಸಲಾದ ಬೃಹತ್ ಸ್ವಚ್ಛತಾ ಆಂದೋಲನ, ಕೊರೋನಾ ಸಂದರ್ಭದ ಅಶಕ್ತರಿಗೆ ದವಸ ಧಾನ್ಯಗಳ ಕಿಟ್ ವಿತರಣೆ ಹಾಗೂ ಉಚಿತ ಲಸಿಕೆ ಕಾರ್‍ಯಕ್ರಮಗಳು ಜನಮನ ತಲುಪಿವೆ. ಮನೆಯಿಲ್ಲದವರಿಗೆ ಮನೆಕಟ್ಟಿಕೊಟ್ಟಿದ್ದಾರೆ. ಹಲವು ಸಂಘ-ಸಂಸ್ಥೆಗಳಿಗೆ, ಸರ್ಕಾರಿ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದ್ದಾರೆ.
ಶ್ರೀಮತಿ ರಶ್ಮಿತಾ ಅವರು ಅತ್ಯುತ್ತಮ ತರಬೇತುದಾರರು ಕೂಡ. ನೂರಾರು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ವ್ಯಕ್ತಿತ್ವ ವಿಕಸನ, ಪರೀಕ್ಷಾ ತಯಾರಿ ಮೊದಲಾದ ವಿಷಯಗಳ ಕುರಿತು ೨೦೦ ಕ್ಕೂ ಹೆಚ್ಚಿನ ತರಬೇತಿಗಳನ್ನು ನೀಡಿದ್ದಾರೆ. ನೂರಾರು ಮಂದಿ ಸಾಧಕರನ್ನು, ನಿವೃತ್ತ ಶಿಕ್ಷಕರನ್ನು ಗುರುತಿಸಿ ಸಂಸ್ಥೆಗೆ ಆಹ್ವಾನಿಸಿ ಸನ್ಮಾನಿಸುವ ಸಹೃದಯತೆಯನ್ನು ಮರೆದಿದ್ದಾರೆ. ಇತಿಹಾಸ ಪ್ರಸಿದ್ಧ ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕಳ ವಿಶೇಷ ಅಂಚೆ ಚೀಟಿಯನ್ನು ಭಾರತೀಯ ಅಂಚೆ ಇಲಾಖೆಯ ಮೂಲಕ ಮುದ್ರಿಸಿ ಲೋಕಾರ್ಪಣೆಗೊಳಿಸಿದ್ದಾರೆ. ರಾಜ್ಯಮಟ್ಟದ ಯುವಸಮ್ಮೇಳನಗಳನ್ನು ನಡೆಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಹಲವು ಹತ್ತು ಸಾಹಿತ್ಯ, ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಸಂಸ್ಥೆಯ ಮೂಲಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸರ್ವಧರ್ಮ ಸಮನ್ವಯಭಾವ ಬೆಳೆಸಲು ಪ್ರತಿವರ್ಷ ‘ಸರ್ವಧರ್ಮ ಅರಿವು’ ಎಂಬ ಕಾರ್‍ಯಕ್ರಮವನ್ನುಹಾಗೂ ಭಾರತೀಯ ಸಂಸ್ಕೃತಿಯ ಹಬ್ಬಗಳನ್ನು, ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಅಚರಿಸಿಕೊಂಡು ಬರಲಾಗಿದೆ. ಸಂಸ್ಥೆಗೆ ಹಲವು ಪೂಜ್ಯರನ್ನು, ಗಣ್ಯರನ್ನು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಣತಜ್ಞರು ಮೊದಲಾದವನ್ನು ಆಹ್ವಾನಿಸಿ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಸಂದ ಈ ಪುರಸ್ಕಾರಕ್ಕಾಗಿ ಗಣ್ಯರು ಹಾಗೂ ಹಿತೈಷಿಗಳು ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಚಿತ್ರ: ರಶ್ಮಿತಾ