ಮೂಡುಬಿದ್ರಿ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಕೊಡಮಾಡುವ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಈ ಬಾರಿ ಸೊಸೈಟಿಯಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಮಾಡಿದ ಎಂ. ಗಣೇಶ್ ನಾಯಕ್ ಅವರಿಗೆ ಮತ್ತು ಸಮಗ್ರ ಸಾಧಕ ಪ್ರಶಸ್ತಿಯು ಮೂಡುಬಿದಿರೆಯ ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ. ಅವರಿಗೆ ದೊರೆಯಲಿದೆ.
ಸೊಸೈಟಿಯ ಸಹಕಾರಿ ಸಪ್ತಾಹವು. ನ. 14ರಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಮತ್ತು ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಲ್ಪವೃಕ್ಷ ಪ್ರಶಸ್ತಿಯು 10 ಗ್ರಾಂ. ಚಿನ್ನದ ಪದಕ, 25ಸಾವಿರ ನಗದು, ಬೆಳ್ಳಿಯ ಸ್ಮರಣಿಕೆ ಹೊಂದಿದ್ದು, ನ.14ರಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಪ್ರದಾನ ಮಾಡಲಿದ್ದಾರೆ.
ನ. 15ರಂದು ಸಮಗ್ರ ಸಾಧಕ ಪ್ರಶಸ್ತಿಯನ್ನು ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಿದ್ದಾರೆ.
ನಂತರ ನಡೆಯುವ ವಿವಿಧ ಸಭಾ ಕಾರ್ಯಕ್ರಮಗಳಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಸಂಪಿಗೆ ಚರ್ಚ್‌ನ ಧರ್ಮಗುರು ಫಾ| ವಿನ್ಸೆಂಟ್ ಡಿಸೋಜ, ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸುಚರಿತ ಶೆಟ್ಟಿ, ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಧರ್ಮದರ್ಶಿ ಜೀವಂಧರ ಕುಮಾರ್, ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ನ. 14ರಂದು ಶಾರ್ವರಿ ಪಿ. ದೇವಾಡಿಗ ಅವರಿಂದ ವಾದ್ಯ ನಿನಾದ, ಯಕ್ಷಗಾನ ನ. 15ರಂದು ಯಕ್ಷಕೃಷ್ಣ ಬಳಗದವರಿಂದ ಯಕ್ಷಗಾನ ನ. 16ರಂದು ನೃತ್ಯ ವೈವಿಧ್ಯ, ನ. 17ರಂದು ಮುತ್ತುದು ಕಂಠಿ ತುಳುನಾಟಕ, ನ. 18ರಂದು ಕೊಳಲು ವಾದನ ಮತ್ತು ಗಾನ ಲಹರಿ, ನ. 19ರಂದು ರಸಮಂಜರಿ, ನ. 20ರಂದು ಗಿಟಾರ್ ವಾದನ ಪ್ರದರ್ಶನಗೊಳ್ಳಲಿದೆ.
ಸಹಕಾರಿ ಸಪ್ತಾಹದ ಸಂದರ್ಭದಲ್ಲಿ ಕಲ್ಪವೃಕ್ಷ ಆರೋಗ್ಯ ಕಾರ್ಡ್‌ನ 25ಮಂದಿ ಫಲಾನುಭವಿಗಳಿಗೆ ಚೆಕ್ ವಿತರಣೆ ನಡೆಯಲಿದೆ.
ಈ ಯೋಜನೆಯಲ್ಲಿ ಈಗಾಗಲೇ 1ಕೋಟಿ ರೂ. ಗೂ ಮಿಕ್ಕಿದ ಆರ್ಥಿಕ ನೆರವು ನೀಡಲಾಗಿದೆ, ವಿವಿಧ ದೇವಸ್ಥಾನ ಸಂಘ ಸಂಸ್ಥೆಗಳು, ಕಾಲೇಜುಗಳು, ಮೂಡುಬಿದಿರೆ ವ್ಯಾಪ್ತಿಯ 30 ಕಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್ಥಿಕ ನೆರವು ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಅಭಿನಂದನೆ, ಹಿರಿಯ ಸಕ್ರೀಯ ಸದಸ್ಯರಿಗೆ ಸನ್ಮಾನ, ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ, ಕನ್ನಡ/ಹಿಂದಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ.
ನ. 17ರಂದು ಮಧ್ಯಾಹ್ನ 1.00ಗಂಟೆಯವರೆಗೆ ಉಚಿತ ವೈದ್ಯಕೀಯ ತಪಾಸಣೆಯು ನಡೆಯಲಿದೆ.
ಪ್ರತಿ ದಿನ ಸಂಜೆ ಗಂಟೆ 6.00ರಿಂದ ಸಭಾ ಕಾರ್ಯಕ್ರಮ ಪ್ರಾರಂಭಗೊಂಡು7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷರಾದ ಎಂ. ಗಣೇಶ್ ನಾಯಕ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ ಕಾಮತ್, ನಿರ್ದೇಶಕರಾದ ಕೆ. ಅಭಯಚಂದ್ರ ಜೈನ್, ಎಂ. ಜಾರ್ಜ್ ಮೋನಿಸ್, ಮನೋಜ್ ಕುಮಾರ್ ಶೆಟ್ಟಿ, ಎಂ. ಪದ್ಮನಾಭ, ಸಿ.ಹೆಚ್. ಅಬ್ದುಲ್ ಗಫೂರ್, ಜಯರಾಮ ಕೋಟ್ಯಾನ್, ಎಂ. ಪಿ. ಅಶೋಕ್ ಕಾಮತ್, ಎಂ. ಜ್ಞಾನೇಶ್ವರ ಕಾಳಿಂಗ ಪೈ, ದಯಾನಂದ ನಾಯ್ಕ್, ಪ್ರೇಮ ಎಸ್. ಸಾಲ್ಯಾನ್, ಅನಿತಾ ಶೆಟ್ಟಿ ಉಪಸ್ಥಿತರಿದ್ದರು.