ಕಾರ್ಕಳ: ಮಕ್ಕಳಿಗೆ ಭಾಷಾ ಜ್ಞಾನ ಅತಿ ಅವಶ್ಯಕ. ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಇಂದಿಗೂ ಕಠಿಣವಾಗಿದೆ. ಭಾಷೆಯ ಉಚ್ಚಾರಣೆ, ವ್ಯಾಕರಣ ಮತ್ತು ಭಾಷಾ ಕೌಶಲ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಕಲಿಕೆ ಸುಲಭವಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಕಳ ವಲಯದ ಎಲ್ಲ ಭಾಷಾ ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಕಲಿಕೆ ಸುಲಭವಾಗಲು ನೆರವಾಗಬೇಕು. ಅದರೊಂದಿಗೆ ಶಿಕ್ಷಕರು ಉತ್ತಮ ಗುಣಮಟ್ಟದ ಪ್ರಶ್ನೆಪತ್ರಿಕೆಯನ್ನು ರಚನೆ ಮಾಡುವಲ್ಲಿ ಉಂಟಾಗಬಹುದಾದ ಕ್ಲಿಷ್ಟತೆಯನ್ನು ಸಂಪನ್ಮೂಲ ಶಿಕ್ಷಕರಿಂದ ತಿಳಿದುಕೊಳ್ಳಬೇಕು. ಶಿಕ್ಷಕರು ಪರಸ್ಪರ ಭೇಟಿ ಮತ್ತು ತಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಂಡಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗಾಗಿ ತರಬೇತಿಯಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಪಾಲ್ಗೊಂಡು ಎಸ್ ಎಸ್ ಎಲ್ ಸಿ ಯಲ್ಲಿ ಕಾರ್ಕಳದ ಫಲಿತಾಂಶ ಅತಿ ಹೆಚ್ಚು ಬರುವಂತೆ ಶ್ರಮವಹಿಸಿ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ. ಹೇಳಿದರು.
ಅವರು ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಶಿಕ್ಷಕರ ಪ್ರಶ್ನೆಪತ್ರಿಕೆ ರಚನಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮುಂಡ್ಕೂರು ವಿದ್ಯಾವರ್ಧಕ ಪ್ರೌಢಶಾಲೆಯ ವಿವೇಕಾನಂದ ಹೆಗ್ಡೆ, ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಚಂದ್ರಶೇಖರ ಭಟ್, ಮುನಿಯಾಲು ಕೆ. ಪಿ. ಎಸ್. ಶಾಲೆಯ ಪ್ರಕಾಶ್ ಪೂಜಾರಿ ಮತ್ತು ಕಾರ್ಕಳ ಕೆ ಎಂ ಇ ಎಸ್ ಶಾಲೆಯ ಸುಪ್ರಿಯಾ ಸಂಪನ್ಮೂಲ ಶಿಕ್ಷಕರಾಗಿ ಪಾಲ್ಗೊಂಡು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕುದಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು, ಆಂಗ್ಲ ಭಾಷಾ ತರಬೇತುದಾರರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾಗಿ ನಮ್ಮನ್ನಗಲಿದ ಕುದಿ ವಸಂತ ಶೆಟ್ಟಿಯವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ, ಶೃದ್ಧಾಂಜಲಿ ಅರ್ಪಿಸಲಾಯಿತು.
ಕಾಬೆಟ್ಟು ಪ್ರೌಢಶಾಲೆಯ ಶಾಂತಲಾ, ಕಣಜಾರು ಪ್ರೌಢಶಾಲೆಯ ಭಾಸ್ಕರ್ ಆಚಾರ್ಯ, ಕಾಂತಾವರ ಪ್ರೌಢಶಾಲೆಯ ತಿಪ್ಪೇಸ್ವಾಮಿಯವರು ತಂಡದ ನಾಯಕತ್ವವನ್ನು ವಹಿಸಿಕೊಂಡು ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಪ್ರಶ್ನೆಪತ್ರಿಕೆ ರಚಿಸಿದರು.
ತೆಳ್ಳಾರು ಪ್ರೌಢಶಾಲೆಯ ಸೆಲಿನ್ ನ್ಯಾನ್ಸಿ ಮಾರ್ಟಿಸ್ ಪ್ರಾರ್ಥಿಸಿದರು. ಸಾಣುರು ಪ್ರೌಢಶಾಲೆಯ ಪೂರ್ಣಿಮಾ ಪ್ರಭು ಸ್ವಾಗತಿಸಿದರು. ಕಾರ್ಕಳ ಎಸ್ ವಿ ಟಿ ಪ್ರೌಢಶಾಲೆಯ ಸುನಿಲ್ ಶೆಟ್ಟಿ ವಂದಿಸಿದರು. ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮಂಜುವಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.