ಹೆಬ್ರಿ: ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪೂಜಾಮಂದಿರ ಸಭಾಗೃಹವನ್ನು ಉಡುಪಿ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ಕೃಷ್ಣದೇವರಿಗೆ ತೊಟ್ಟಿಲು ಪೂಜೆ ನೆರವೇರಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಒಂದು ಗ್ರಾಮಕ್ಕೆ ದೇವಾಲಯ, ವಿದ್ಯಾಲಯ ಇರುವಂತೆ ಗೋವಿನ ಆಲಯ ಇರುವುದು ನಮಗೆ ಶ್ರೇಯಸ್ಸನ್ನು ತರುತ್ತದೆ. ಗೋವಿನ ಸೇವೆ ಮಾಡುವುದರಿಂದ ಎಲ್ಲಾ ಗ್ರಹಚಾರ, ಕಷ್ಟ, ನಷ್ಟ ಪರಿಹಾರವಾಗುತ್ತದೆ. ಅಲ್ಲದೆ ಗೋವುಗಳು ಇಲ್ಲದೆ ನಮ್ಮ ಜೀವನ ಇಲ್ಲ. ಆದ್ದರಿಂದ ದಾನಿಗಳ ಮತ್ತು ಎಲ್ಲರ ಸಹಕಾರದಿಂದ ಈ ಗೋಶಾಲೆ ಅಭಿವೃದ್ಧಿ ಆಗಿರುವುದು ತುಂಬಾ ಸಂತಸ ತಂದಿದೆ. ಎಲ್ಲರಿಗೂ ಗೋಪಾಲಕೃಷ್ಣನ ಅನುಗ್ರಹವಾಗಲಿ ಎಂದರು.
ಈ ಸಂದರ್ಭದಲ್ಲಿ ಸಹಸ್ರ ದೀಪೋತ್ಸವ, ಗೋಗ್ರಾಸ ಪ್ರದಾನ, ಚಕ್ರಾಬ್ ಜ ಮಂಡಲ ಪೂಜೆ ವಿದ್ವಾನ್ ಕೃಷ್ಣದಾಸ ಭಟ್, ರಾಘವೇಂದ್ರ ಅಡಿಗ, ವಾಸುದೇವ ಉಪಾಧ್ಯಾಯ, ಸುದರ್ಶನ್ ಕಲ್ಕೂರ್ ನೇತೃತ್ವದಲ್ಲಿ ನಡೆಯಿತು.
ಹೆಬ್ರಿ ಗಣೇಶ್ ಪಡಿಯಾರ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ, ಸುಧನ್ವ ಭಟ್ ಗೌರಿಬಿದನೂರು ಅವರಿಂದ ಭರತನಾಟ್ಯ ನಡೆಯಿತು.
ಟ್ರಸ್ಟ್ ನ ಗೋಶಾಲಾ ಟ್ರಸ್ಟಿಗಳಾದ ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ, ಎಂ. ರವಿರಾವ್ ಹೆಬ್ರಿ, ಲಕ್ಷ್ಮಣ ಭಟ್ ಹೆಬ್ರಿ, ಡಾ. ರಾಮಚಂದ್ರ ಐತಾಳ್ ಹೆಬ್ರಿ, ವಿಷ್ಣುಮೂರ್ತಿ ನಾಯಕ್, ಬಾಲಕೃಷ್ಣ ನಾಯಕ್, ಪುಟ್ಟಣ್ಣ ಭಟ್, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್, ಹೆಬ್ರಿ ಪರಿಸರದ ಗೋಭಕ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರುಕ್ಮಿಣಿ ಅಮ್ಮ ಮತ್ತು ಕುಟುಂಬಸ್ಥರು ಮಾರ್ಮಕ್ಕಿ ಮಠ, ಗೌರಿಬಿದನೂರು ಅವರು ಗೋಶಾಲೆಗೆ ದೇಣಿಗೆಯನ್ನು ಸ್ವಾಮಿಜಿಯವರ ಮೂಲಕ ಹಸ್ತಾಂತರಿಸಿದರು.
ಎಲ್ಲಾ ಭಕ್ತರಿಗೂ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಅನಂತರ ಅನ್ನಸಂತರ್ಪಣೆ ನಡೆಯಿತು. ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಗಿಲ್ಲಾಳಿಯ ಸರ್ವಸದಸ್ಯರು ಸಹಕರಿಸಿದರು. ಗೋಶಾಲೆಯ ಟ್ರಸ್ಟಿಗಳಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.