ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಸ್ಥಳೀಯ ಗಾಂಧೀ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಜಗೋಳಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜ ತಾವರಗಿ ಅವರು ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿ ಕ್ರೀಡಾ ಜ್ಯೋತಿ ಬೆಳಗಿದರು.
ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಇಕ್ಬಾಲ್ ಅಹಮ್ಮದ್ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ಅವರು ಕ್ರೀಡಾಳುಗಳ ಪರಿಚಯ ಸ್ವೀಕರಿಸಿದರು.
ನಂತರ ನಡೆದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ತಾವರಗಿ ಅವರು “ದೈಹಿಕರಾಗಿ ಬಲಾಢ್ಯರಾಗಬೇಕಾದರೆ ಕ್ರೀಡಾಚಟುವಟಿಕೆಗಳು ಬಹಳ ಮುಖ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಟೋಟಗಳು ಅಥವಾ ದೈಹಿಕ ಚಟುವಟಿಗಳ ಪಾತ್ರ ಬಹಳ ಇದೆ. ಮಕ್ಕಳು ಓದಿನ ಜೊತೆಗೆ ಕ್ರೀಡೆಯಲ್ಲಿಯೂ ಉನ್ನತ ಸಾಧನೆ ಮಾಡುವುದರ ಕಡೆಗೂ ಮಹತ್ವ ನೀಡಬೇಕು” ಎಂದು ಹೇಳಿದರು.
ರೊ.ಇಕ್ಬಾಲ್ ಅಹಮ್ಮದ್ ಅವರು ಮಾತನಾಡಿ “ದೇಶಾಭಿಮಾನ ಮೂಡಿಸಲು ಹಾಗೂ ಸಮಾಜದಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ಕ್ರೀಡೆಗಳ ಕೊಡುಗೆ ಅನನ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಹಲವಾರು ಕ್ರೀಡಾಪಟುಗಳು ಇಂದು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದು ನಮ್ಮ ಸಂಸ್ಥೆಯ ಕ್ರೀಡಾ ಪ್ರೋತ್ಸಾಹಕ್ಕೆ ಸಾಕ್ಷಿ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಈ ಸಂಸ್ಥೆಗೆ ಮಾತ್ರವಲ್ಲ ಕಾರ್ಕಳ ತಾಲೂಕಿಗೆ ಹೆಮ್ಮೆಯ ವಿಚಾರ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಕರ್ಷಕ ಕ್ರೀಡಾ ಪಥಸಂಚಲನ ಹಾಗೂ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಿತು.
ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕರಾದ ಸಿ.ಶಾರ್ಲೆಟ್ ಸಿಕ್ವೇರಾ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಡಿ’ಸೋಜ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ದ್ವಿತೀಯ ವಿಜ್ಞಾನ ವಿಭಾಗದ ಅನಘ ಸ್ವಾಗತಿಸಿ ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯ ವಂದಿಸಿದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಕೃಷ್ಣ ಪ್ರಸಾದ್, ಪ್ರಕಾಶ್ ನಾಯ್ಕ್, ಕು.ಲಾವಣ್ಯ ಕ್ರೀಡಾಕೂಟ ಸಂಘಟಿಸಿದ್ದರು.