ಕಾರ್ಕಳ: ಸಾಮಾಜಿಕ ಜಾಲತಾಣದಿಂದ ನಮ್ಮ ಕೌಟುಂಬಿಕ ಸಂಬಂಧಗಳು ಇಂದು ಬಿರುಕು ಬಿಟ್ಟಿವೆ. ಹದಿಹರೆಯ, ವ್ಯಕ್ತಿತ್ವ ರೂಪಿಸುವ ಸಂಕ್ರಮಣ ಕಾಲ. ಇಂತಹ ಸಂದರ್ಭದಲ್ಲೆ ಜೀವನ ಮೌಲ್ಯಗಳನ್ನು ಬಿತ್ತುವ ‘ಮೌಲ್ಯಸುಧಾ’ದ ಮೂಲಕ ಕೌಟುಂಬಿಕ, ಬದುಕಿನ ಪ್ರೀತಿಯನ್ನು ತುಂಬುತ್ತಿರುವ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ, ವಿಭಿನ್ನ ರೀತಿಯಲ್ಲಿ ಶಿಕ್ಷಣದ ಪರಂಪರೆಗೆ ಕೊಡುಗೆ ನೀಡುತ್ತಿರುವ ಕಾರ್ಕಳದ ಹೆಮ್ಮೆ ಜ್ಞಾನಸುಧಾವಾಗಿದೆ ಎಂದು ತರಂಗ ವಾರಪತ್ರಿಕೆಯ ಸಂಪಾದಕಿ ಡಾ.ಯು.ಬಿ. ರಾಜಲಕ್ಷ್ಮಿ ನುಡಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2024ರ ಮುಖ್ಯಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಶೇಖರ್ ಶೆಟ್ಟಿಯವರು ಮಾತನಾಡಿ,ವ ಕಾರಗಳಾದ ವಟು, ವಸನ, ವಿದ್ಯೆ, ವಿನಯ ಮತ್ತು ವಾಕ್ ವಿ ಕಾರವಾಗದೆ ಸಾಕಾರಾವಾದರೆ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ.ಯೋಜನೆ ಮತ್ತು ಸ್ವಯಂ ಮೌಲ್ಯಮಾಪನ ನಮ್ಮಲ್ಲಿರ ಬೇಕು. ಯಾರು ರಾತ್ರಿ ಮಲಗುವಾಗ, ಬೆಳಗ್ಗೆ ಏಳುವಾಗ ನಗು ಮುಖದಲ್ಲಿ ಇರುತ್ತಾರೋ ಅವರೇ ಸುಖಿಗಳು. ಹಾಗಿದ್ದಾಗಲೇ ಜೀವನ ಸಾರ್ಥಕ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು, ಸಂಸ್ಥೆ ನಡೆಸಲು ಹುದ್ದೆ ಮುಖ್ಯವಲ್ಲ. ಮನಸು ಮುಖ್ಯ. ಸಂಖ್ಯೆ ಮುಖ್ಯವಲ್ಲ ಸಂಕಲ್ಪ ಮುಖ್ಯ.ಅಂತಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದ ಸೇವೆಯಿಂದ ಧನ್ಯನಾಗಿದ್ದೇನೆ. ವಿದ್ಯಾರ್ಥಿಗಳು ಇಲ್ಲಿ ಆಗಮಿಸಿದ ಮುಖ್ಯ ಅತಿಥಿಗಳ ಸಂದೇಶವನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮಕಾರ್ಯ ಸಾರ್ಥಕ ಎಂದರು.
ಗೌರವ ಸನ್ಮಾನ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ರಾಜೇಂದ್ರ ಕೆ.ವಿ ಮತ್ತು ಕೀರ್ತನಾ ಬಿ.ಡಿ. ದಂಪತಿಗಳ ಸುಪುತ್ರ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸರ್ವಜಿತ್‌ಕೆ.ಆರ್. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ನೆರವು :
ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2024ದಲ್ಲಿ, ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕೆಂಬ ಡಾ.ಸುಧಾಕರ್ ಶೆಟ್ಟಿಯವರ ಆಶಯದಂತೆ, ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಸಂದರ್ಭ ಆಯೋಜಿಸಿದ್ದ ‘ವ್ಯವಹಾರದಲ್ಲಿ ಕಲಿಕೆ ಮತ್ತು ಗಳಿಕೆ’ ಎಂಬ ವಿನೂತನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಬಂದ ಲಾಭದಲ್ಲಿ ರೂ.15ಸಾವಿರವನ್ನು ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮಂಗಳಪಾದೆಯ ಮಂಜುನಾಥ್ ದೇವಾಡಿಗ ಹಾಗೂ ಪ್ರಮಿಳಾ ದೇವಾಡಿಗದಂಪತಿಯ ಮಗನಾದ 14 ವರ್ಷ ಪ್ರಾಯದ ಚರಣ್ ಇವರಿಗೆ ಮುಖ್ಯ ಅತಿಥಿಗಳಿಂದ ಹೆತ್ತವವರ ಮೂಲಕ ಹಸ್ತಾಂತರಿಸಿಲಾಯಿತು.
ಜ್ಞಾನಸುಧಾ ಪತ್ರಿಕೆ-38 ಬಿಡುಗಡೆ :ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ತ್ರೈಮಾಸಿಕ ಪತ್ರಿಕೆಯಾದ ಜ್ಞಾನಸುಧಾ ಪತ್ರಿಕೆ- 38ನ್ನು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಯಿತು.
ಕಾಲೇಜಿನ ವಾರ್ಷಿಕ ವರದಿಯನ್ನು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್, ವಿದ್ಯಾರ್ಥಿಗಳ ಸಾಂಸ್ಕೃತಿಕ ಸಾಧನೆಯ ಪಟ್ಟಿಯನ್ನು ಭೌತಶಾಸ್ತ್ರ ಉಪನ್ಯಾಸಕ ಚಂದ್ರಕಾಂತ್, ಕ್ರೀಡಾಸಾಧಕರ ಪಟ್ಟಿಯನ್ನು ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಾಚಿಸಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಉಷಾ ರಾವ್‌ಯು, ವಿದ್ಯಾರ್ಥಿನಾಯಕರಾದ ಮಯೂರ್ ಎಂ.ಗೌಡ ಮತ್ತುಅನನ್ಯ ವಿ.ಶೆಟ್ಟಿ ಹಾಗೂ ವೇದಿಕೆಯ ಕೆಳಭಾಗದಲ್ಲಿ ಟ್ರಸ್ಟಿ ನಿತ್ಯಾನಂದ ಪ್ರಭು, ಕೌನ್ಸಿಲರ್ ಡಾ.ಪ್ರಸನ್ನ ಹೆಗ್ಡೆ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಗ್ರಾಮ ಪಂಚಾಯತ್ ಸದಸ್ಯರಾದ ರಹಮತ್ ಉಲ್ಲಾ ಹಿತೈಷಿಗಳಾದ ತ್ರಿವಿಕ್ರಮಕಿಣಿ, ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯನಿಹಣಾಧಿಕಾರಿ ದಿನೇಶ್ ಎಂ .ಕೊಡವೂರ್ ಸ್ವಾಗತಿಸಿ, ಆಂಗ್ಲ ಭಾಷಾ ಉಪನ್ಯಾಸಕಿ ಕು.ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.