ಮೂಡುಬಿದಿರೆ: ಈ ಬಾರಿ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೌರವ ಅಭಿನಂದನೆ ನಡೆಯಿತು.
ಬುಧವಾರ ಸಂಜೆ ಪ್ರಶಸ್ತಿ ಪ್ರದಾನದ ಬಳಿಕ ಅದೇ ವೇದಿಕೆಯಲ್ಲಿ ಹಿಂದೂಸ್ಥಾನಿ ಗಾಯನ ನಡೆಸಿದ ಬಳಿಕ ರಾತ್ರಿ ಅವರು ನೇರವಾಗಿ ಪೇಟೆಯ ದೇವಸ್ಥಾನಕ್ಕೆ ಆಗಮಿಸಿ ಏಕಾಹ ಭಜನಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಗೀತಾ ಜಯಂತಿಯ ಸುದಿನ ದೇವಳದ ಏಕಾಹ ಭಜನಾ ಮಹೋತ್ಸವ 75ನೇ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮದಲ್ಲಿ ಭಾಗಿಯಾದ ವೆಂಕಟೇಶ್ ಕುಮಾರ್ ದಿನದ ವಿಶೇಷ ದೀಪಾಲಂಕಾರ ಸಹಿತ ರಾತ್ರಿ ಪೂಜೆಯ ವೇಳೆ ದೇವರ ದರ್ಶನ ಪಡೆದರು.
ಶ್ರೀ ದೇವಳದ ಆಡಳಿತ ಮೊಕ್ತೇಸರ ಜಿ. ಉಮೆಶ್ ಪೈ ಅವರು ಹಿರಿಯ ಸಂಕೀರ್ತನಕಾರ ದಿ. ಎಂ. ಉಮೇಶ್ ಕಾಮತ್ ಸ್ಮರಣಾರ್ಥ ಕುಟುಂಬಿಕರ ಗೌರವ ಅಭಿನಂದನೆಯ ಅಂಗವಾಗಿ ಪಂ. ವೆಂಕಟೇಶ್ ಕುಮಾರ್ ಅವರನ್ನು ಸಮ್ಮಾನಿಸಿದರು.
ದೀಪಾಲಂಕಾರ, ಏಕಾಹ ಭಜನಾ ಮಹೋತ್ಸವ ಸಂಭ್ರಮದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಅರ್ಚಕ ವೇ. ಮೂ. ಹರೀಶ್ ಭಟ್ ಪ್ರಸಾದ ನೀಡಿದರು. ಈ ಸಂಭ್ರಮದಲ್ಲಿ ಪುಳಕಿತರಾದ ವೆಂಕಟೇಶ್ ಕುಮಾರ್ ಭೂ ವೈಕುಂಠ ದರ್ಶನದ ಅನುಭವವಾಗಿದೆ. ಧನ್ಯತೆ ಅನುಭವಿಸಿದ್ದೇನೆ . ಮುಂದೆ ಇಲ್ಲಿ ಸೇವೆ ಸಲ್ಲಿಸುವ ಆಶಯ ವ್ಯಕ್ತಪಡಿಸಿದರು. ಜತೆಗೆ ಪಾಲ್ಗೊಂಡ ಸಹ ಕಲಾವಿದರಾದ ನರೇಂದ್ರ ಎಲ್. ನಾಯಕ್ , ಕೇಶವ ಜೋಶಿ, ರಮೇಶ್ ಕೋಲ್ಕುಂದ್, ರಾಘವ ಹೆಗ್ಡೆ ಅಭಿಜಿತ್ ಶೆಣೈ ಸಚ್ಚೇರಿಪೇಟೆ ಅವರನ್ನು ಗೌರವಿಸಲಾಯಿತು.
ಏಕಾಹ ಭಜನಾ ಮಹೋತ್ಸವದಲ್ಲಿ ಮೂಲ್ಕಿಯ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ಸೇವೆಯ ನಡುವೆ ” ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವನು” ಎಂದು ಭಾವಪರವಶರಾಗಿ ಅವರು ಸಲ್ಲಿಸಿದ ಗಾಯನ ಸೇವೆ ಸೇರಿದವರನ್ನು ಪುಳಕಿತರನ್ನಾಗಿಸಿತು. ಶ್ರೀನಿವಾಸ ಭಾಗವತ್ ,ಕಲಾವಿದ ಮೂಲ್ಕಿ ರವೀಂದ್ರ ಪ್ರಭು ಸಹಿತ ಮಂಡಳಿಯ ಸದಸ್ಯರು ಹಿನ್ನೆಲೆಯಲ್ಲಿ ದನಿಗೂಡಿಸಿದರು.
ಶ್ರೀ ದೇವಳದ ಕೋಶಾಧಿಕಾರಿ ಶಿವಾನಂದ ಪ್ರಭು, ಮೊಕ್ತೇಸರರಾದ ಪಿ.ರಾಮನಾಥ ಭಟ್, ಟಿ.ರಘುವೀರ ಶೆಣೈ, ಎಂ.ರಾಜೇಶ್ ಮಲ್ಯ, ಮಾಜಿ ಮೊಕ್ತೇಸರ ಪದ್ಮನಾಭ ಪಿ. ಪ್ರಭು, ಶ್ರೀಮತಿ ಶಾಂತಾ ಉಮೇಶ್ ಕಾಮತ್ ಮತ್ತು ಕುಟುಂಬಿಕರು, ಶ್ರೀ ವೆಂಕಟರಮಣ ಭಜನಾ ಮಂಡಳಿಯ ಅಧ್ಯಕ್ಷ ಎಂ. ತುಕಾರಾಮ ಮಲ್ಯ , ಹಿರಿಯರಾದ ಎಂ. ನಾಗೇಂದ್ರ ಭಟ್ . ಪಂಢರಾಪುರದಿಂದ ಆಗಮಿಸಿದ ಬಾಲಕರ ಮಂಡಳಿಯ ಕುಣಿತ ಭಜನೆಯ ಸದಸ್ಯರು ,ಮತ್ತಿತರರು ಉಪಸ್ಥಿತರಿದ್ದರು.