ಹೆಬ್ರಿ: ಮನುಷ್ಯನು ವೈಯಕ್ತಿಕವಾಗಿಯೂ, ಸಮಾಜ ಜೀವಿಯಾಗಿಯೂ ಬೆಳೆಸಿಕೊಳ್ಳಬಹುದಾದ ಎಲ್ಲ ಸದ್ಗುಣಗಳ ನಿರೂಪಣೆಯೂ ನಮ್ಮ ಮಹಾಕಾವ್ಯಗಳಲ್ಲಿ ಅಡಗಿದೆ. ಜೀವನದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾರ್ಗದರ್ಶಿಯಾಗಿರುವ ರಾಮಾಯಣ, ಮಹಾಭಾರತ ಕಥೆಗಳನ್ನು ಮಕ್ಕಳು ತಿಳಿದುಕೊಂಡು ಭವಿಷ್ಯದ ಉತ್ತಮ ಪ್ರಜೆಗಳಾಗಿ ಜೀವನವನ್ನು ರೂಪಿಸಿಕೊಳ್ಳಿ ಎಂದು ಮುದ್ರಾಡಿ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ನಡೆದ ರಾಮಾಯಣ, ಮಹಾಭಾರತ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಪರೀಕ್ಷೆಗೆ 26 ವಿದ್ಯಾರ್ಥಿಗಳು ಹಾಜರಾಗಿದ್ದು ಶಾಲಾ ಪ್ರಥಮ ಸ್ಥಾನವನ್ನು ಪಡೆದುಕೊಂಡ 8 ನೆ ತರಗತಿಯ ಶೋಭಿತ್ ಅವರಿಗೆ ಪದಕದೊಂದಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಲಾಲ್, ಶಾಲಾ ವಿದ್ಯಾರ್ಥಿ ನಾಯಕ ರಂಜಿತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಅಧ್ಯಾಪಿಕೆ ಇಂದಿರಾ ಬಾಯರಿ ಸ್ವಾಗತಿಸಿದರು. ಪರೀಕ್ಷಾ ಸಂಯೋಜಕ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಕ್ಷಕರಾದ ಮಹೇಶ್ ನಾಯ್ಕ್, ಪಿ. ವಿ. ಆನಂದ ಸಹಕರಿಸಿದರು.