ವರಂಗ: ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾಸ್ಫೂರ್ತಿಯಿಂದ ಎಲ್ಲರೂ ಉತ್ತಮವಾಗಿ ಭಾಗವಹಿಸಿ, ಸದಾ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಂಘವು ಯಶಸ್ಸನ್ನು ಪಡೆಯುವಂತಾಗಲಿ ಎಂದು ವರಂಗ ಕೆ. ಇ. ಎಲ್. ಅಕೌಂಟ್ ಅಸಿಸ್ಟೆಂಟ್ ಮ್ಯಾನೇಜರ್ ಸುದೀಪ್ ದೇವಾಡಿಗ ಹೇಳಿದರು.
ಅವರು ವರಂಗ ಬೈದಶ್ರೀ ಕ್ರಿಕೆಟರ್ಸ್ ವತಿಯಿಂದ ಮೂಡುಬೆಟ್ಟು ಮೈದಾನದಲ್ಲಿ ನಡೆದ ೪೦ ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಶಿವಪುರ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್, ಕಾರ್ಕಳ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ರಾಘವ ನಾಯ್ಕ್ ಪಾಲ್ಗೊಂಡು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ ಬಲ್ಲಾಡಿ ಚಂದ್ರಶೇಖರ ಭಟ್, ಸುವರ್ಣ ಕರ್ನಾಟಕ ರಂಗ ಪ್ರಶಸ್ತಿ ಪುರಸ್ಕೃತರಾದ ವಿ. ಆರ್. ಸತೀಶ್ ಆಚಾರ್ಯ, ಕಿತ್ತೂರು ರಾಣಿ ಚೆನ್ನಮ್ಮ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆರಾಧ್ಯ ಹಾಗೂ ಎಸ್. ಎಸ್. ಎಲ್. ಸಿ.ಯಲ್ಲಿ ರಾಜ್ಯಮಟ್ಟದಲ್ಲಿ 9 ನೆ ಸ್ಥಾನ ಪಡೆದ ಅನುಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸಂಘಟನೆಯ ವತಿಯಿಂದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಯಾವುದೇ ಕೆಲಸ ಇರಲಿ ಅದರಲ್ಲಿ ಸತತ ಆಸಕ್ತಿ ಮತ್ತು ಅಭ್ಯಾಸ ಇದ್ದಾಗ ಗುರಿಯನ್ನು ತಲುಪಲು ಸಾಧ್ಯ. ಜೀವನದಲ್ಲಿ ಸೋತು ಗೆದ್ದವರ ಕಥೆಗಳನ್ನು ತಿಳಿದುಕೊಂಡು ಮುನ್ನುಗ್ಗಿದಾಗ ಯಾವುದೇ ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಮಗಾಗುತ್ತದೆ. ಸಂಘಟನೆಗಳು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಾಗ ಆ ಸಂಘಟನೆಗೆ ಎಲ್ಲರ ಸಹಕಾರ ನಿರಂತರವಾಗಿ ದೊರಕುತ್ತದೆ. ಕೇವಲ ಕ್ರೀಡಾಚಟುವಟಿಕೆಗಳಿಗೆ ಸೀಮಿತಗೊಳಿಸದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಮೂಲಕ ಬೈದಶ್ರೀ ಕ್ರಿಕೆಟರ್ಸ್ ಸಂಘಟನೆ ಮಾದರಿ ಕೆಲಸ ಮಾಡುತ್ತಿದೆ. ನಿರಂತರ ಪ್ರಯತ್ನ, ಸಾಧಿಸುವ ಛಲ, ಕಠಿಣ ಪರಿಶ್ರಮದೊಂದಿಗೆ ಬೈದಶ್ರೀ ಸಂಘಟನೆ ಇನ್ನಷ್ಟು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಯಶಸ್ಸನ್ನು ಪಡೆಯಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೆ. ಇ. ಎಲ್. ಯೂನಿಯನ್ ಅಧ್ಯಕ್ಷರಾದ ಆನಂದ ಪೂಜಾರಿ, ಪಂಚಾಯತ್ ಸದಸ್ಯರಾದ ಪ್ರಕಾಶ್ ದೇವಾಡಿಗ, ವರಂಗ ಸಿ. ಎ. ಬ್ಯಾಂಕ್ ಅಧ್ಯಕ್ಷರು ಹಾಗೂ ಪದ್ಮಶ್ರೀ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರಾದ ಲಕ್ಷ್ಮಣ ಆಚಾರ್ಯ, ಬೈದಶ್ರೀ ಕ್ರಿಕೆಟ್ ಸಂಘಟನೆ ಅಧ್ಯಕ್ಷರಾದ ಅರ್ಬಿ ಸುಂದರ ಪೂಜಾರಿ, ಗೌರವಾಧ್ಯಕ್ಷರಾದ ಸುಧಾಕರ್ ಪೂಜಾರಿ, ಹಿರಿಯರಾದ ಶಂಕರ್ ಶೆಟ್ಟಿ ವರಂಗ ಉಪಸ್ಥಿತರಿದ್ದರು.
ವರಂಗದ ವಕೀಲ ವಿ. ಸುರೇಶ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬೈದಶ್ರೀ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶೋಧನ್ ಶೆಟ್ಟಿ ಬಲ್ಲಾಡಿ ವಂದಿಸಿದರು. ಸಂಘಟನೆಯ ಸರ್ವ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.