ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಅಂತಿಮ ದಿನ ಭಕ್ತರ ಅಪಾರ ಸಂಖ್ಯೆಯನ್ನು ಆಕರ್ಷಿಸಿದ್ದು, ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಅರ್ಪಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು. ಈ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಭಕ್ತಿಯಲ್ಲಿ ಮಿಂದೇಳುವಂತಾಗಿದ್ದು, ನಂಬಿಕೆ, ಭರವಸೆ, ಮತ್ತು ಸಮುದಾಯ ಸೌಹಾರ್ದತೆಯ ಪ್ರತೀಕವಾಗಿ ಪರಿಣಮಿಸಿತು.
ಬಸಿಲಿಕಾದ ವಠಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹೂವಿನ ತೋರಣಗಳು, ವಿದ್ಯುತ್ ದೀಪಾಲಂಕಾರ, ಮತ್ತು ವೈಭವೀಕರಿಸಲಾದ ಶೃಂಗಾರದಿಂದ ಭಕ್ತರ ಮನಸ್ಸನ್ನು ಸೆಳೆಯುವಂತಾಗಿದ್ದವು. ಈ ವರ್ಷದ ಮಹೋತ್ಸವದ ಪ್ರಮುಖ ಸಂದೇಶ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ”. ಎಂಬುದಾಗಿದ್ದು, ಎಲ್ಲ ಧರ್ಮದ ಜನರ ಒಗ್ಗಟ್ಟನ್ನು ಉತ್ತೇಜಿಸುವ ಸಂದೇಶವನ್ನು ನೀಡಿತು.
ಮಹೋತ್ಸವದ ಶೃಂಗಾರ ದಿನವಾದ ಜ. 30ರಂದು ಎಂಟು ಬಲಿಪೂಜೆಗಳು ನೆರವೇರಿದವು. ಬಾರಾಯ್ ಪುರ್ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅ|ವಂ| ಡಾ. ಸಲ್ವಾದೋರ್ ಲೋಬೊ ಅವರು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿದರು. ಗುರು ಜಿತೇಶ್, ತಮ್ಮ ಧಾರ್ಮಿಕ ಬೋಧನೆಯಲ್ಲಿ, ಭರವಸೆಯ ಜೀವನ, ಕ್ರಿಸ್ತನೊಂದಿಗೆ ಯಾತ್ರಾರ್ಥಿಗಳಾಗುವ ಮಹತ್ವ, ಮತ್ತು ಜುಬಿಲಿ ವರ್ಷದ ಆಶಯಗಳನ್ನು ಪ್ರಬೋಧಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಮಹೋತ್ಸವದಲ್ಲಿ ಪಾಲ್ಗೊಂಡು, ಬಲಿಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಭಕ್ತಾದಿಗಳು ಪವಿತ್ರ ಪುಷ್ಕರಣಿಯ ಜಲತೀರ್ಥ, ಮೊಂಬತ್ತಿ ಬೆಳಗಿಸುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪಪ್ರಸಾದ ಸೇವೆ ಮುಂತಾದ ಆಚರಣೆಗಳಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.
ಸಂಜೆಯ ಅಂತಿಮ ಪೂಜೆಯ ಬಳಿಕ, ಸಂತ ಲಾರೆನ್ಸ್ ಅವರ ಪವಾಡಮಯ ಪ್ರತಿಮೆಯನ್ನು ಗುಡಿಗೆ ಮೆರವಣಿಗೆಯ ಮೂಲಕ ಮರುಸ್ಥಾಪಿಸಲಾಯಿತು, ಮತ್ತು ಮಹೋತ್ಸವದ ಧ್ವಜವನ್ನು ಗೌರವಯುತವಾಗಿ ಕೆಳಗಿಳಿಸಲಾಯಿತು. ಭಕ್ತರ ಪಾಲಿಗೆ ಇದು ಒಂದು ದಿವ್ಯಾನುಭವವಾಗಿದ್ದು, ಮಹೋತ್ಸವವು ಧಾರ್ಮಿಕ ನಂಬಿಕೆ, ಸೌಹಾರ್ದತೆ, ಮತ್ತು ಸಮುದಾಯ ಭಾವೈಕ್ಯತೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿತು.