ಮುನಿಯಾಲು ಶ್ರೀಮನ್ನಾಗಮಂಡಲದಲ್ಲಿ ” ರೈತಪೀಠ ” ಪ್ರಶಸ್ತಿ ಪ್ರದಾನ.
” ರೈತಪೀಠ ಇದು ಈ ನೆಲದ ಜ್ಞಾನಪೀಠ” ಕೃತಿ ಬಿಡುಗಡೆ.
– ಸುಕುಮಾರ್ ಮುನಿಯಾಲ್
ಮುನಿಯಾಲು (ಗೋಧಾಮ) : ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಫೆಬ್ರವರಿ 20ರಂದು ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿ ಪ್ರಧಾನ ನಡೆಯಲಿದೆ.
250ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡಬಿದರೆ ಎಸ್ ಕೆಎಫ್ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಸ್ವೀಕರಿಸುವರು. ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ “ರೈತಪೀಠ” ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಹಂತಕ್ಕೆ ಬೆಳೆಸಬೇಕು, ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುನಿಯಾಲು ಗೋಧಾಮ ಮತ್ತು ಮೂಡಬಿದರೆ ಎಸ್ ಕೆಎಫ್ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ತನ್ನ ವಿನೂತನ ಯೋಜನೆ ಯೋಚನೆಯ ಮಾಹಿತಿ ನೀಡಿದರು
.
ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮಠದ ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೂಜ್ಯಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಅಧ್ಯಕ್ಷತೆಯನ್ನು ಮೂಡಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಲಿದ್ದಾರೆ.
ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗೋಧಾಮದ ಪ್ರವರ್ತಕ ಡಾ. ಜಿ. ರಾಮಕೃಷ್ಣ ಆಚಾರ್, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ ಆಚಾರ್ಯ ಜಲಕದಕಟ್ಟೆ, ಮಂಗಳೂರು ಎಸ್ ಕೆ ಜಿ ಐ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಪೆರ್ಡೂರು ಉಪೇಂದ್ರ ಆಚಾರ್ಯ ಉಪಸ್ಥಿತರಿರುತ್ತಾರೆ.
ಗೋಧಾಮದ ಪ್ರವರ್ತಕ ಡಾ. ಜಿ ರಾಮಕೃಷ್ಣ ಆಚಾರ್ಯ ಅವರ ಸಾಧನೆ ಯಶೋಗಾತೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ರಚಿಸಿರುವ ” ರೈತಪೀಠ ಇದು ಈ ನೆಲದ ಜ್ಞಾನಪೀಠ” ಕೃತಿಯ ಬಿಡುಗಡೆ ನಡೆಯಲಿದೆ.
20 ರಂದು ಶನಿವಾರ ಸಂಜೆ : ಸಭಾ ಮಂಡಲ. – ಫೆಬ್ರವರಿ 21ರಂದು ಬೆಳಗ್ಗಿನಿಂದ ವಿದ್ವಾನ್ ಶ್ರೀ ಕೊರಂಗ್ರಪಾಡಿ ಕುಮಾರಗುರು ತಂತ್ರಿಯವರ ನೇತ್ರತ್ವದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲದ ಆಶ್ಲೇಷಾ ಬಲಿದಾನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಸಂಜೆ ದುರ್ಗಾನಮಸ್ಕಾರ ಪೂಜೆ, ರಾತ್ರಿ ೮ ರಿಂದ ಹಾಲಿಟ್ಟು ಸೇವೆ ಏಕಪವಿತ್ರ ಶ್ರೀಮನ್ನಾಗಮಂಡಲ ಸೇವೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಶ್ರೀ ಭವಾನಿ ಭೋಜನಾಲಯದಲ್ಲಿ ಶ್ರೀಮನ್ನಾಗಮಂಡಲದ ಸಂಪನ್ನದ ವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಭಾಮಂಡಲದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನಮ್ ಸುಬ್ರಹ್ಮಣ್ಯ ಮಠದ ಪೂಜ್ಯಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಶ್ರೀ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವಹಿಸುತ್ತಾರೆ. ಅಧ್ಯಕ್ಷತೆಯನ್ನು ಮುನಿಯಾಲು ಶ್ರೀಮನ್ನಾನಾಗಮಂಡಲದ ಸೇವಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಸಾಣೂರುಗುತ್ತು ವಹಿಸಲಿದ್ದಾರೆ. ಶಾಸಕ ಸುನಿಲ್ ಕುಮಾರ್, ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅಧ್ಯಕ್ಷ ಶ್ರೀಧರಾಚಾರ್ಯ ವಡೇರ ಹೋಬಳಿ ಉಪಸ್ಥಿತರಿರುತ್ತಾರೆ. ಆಧ್ಯಾತ್ಮಿಕ ಚಿಂತಕಿ, ಅಂಕಣಕಾರರಾದ ರೂಪ ಅಯ್ಯರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಕಲ ಸಿದ್ಧತೆ : ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದ ಯಶಸ್ಸಿಗಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ನಾಡಹಬ್ಬದಂತೆ ಊರಿಗೆ ಊರೇ ಶ್ರೀಮನ್ನಾಗಮಂಡಲಕ್ಕೆ ಸಜ್ಜಾಗಿದೆ. ಡಾ.ಜಿ.ರಾಮಕೃಷ್ಣ ಆಚಾರ್ ಮಾರ್ಗದರ್ಶನದಲ್ಲಿ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋಧರ ಶರ್ಮ ಬಾರ್ಕೂರು ಹಾಗೂ ಪ್ರಧಾನ ಸಮಿತಿಯ ಗೌರವಾಧ್ಯಕ್ಷರು, ಜೊತೆಕಾರ್ಯದರ್ಶಿಗಳು, ಮಾರ್ಗದರ್ಶಕರು ಮತ್ತು ವಿವಿಧ ಉಪಸಮಿತಿಗಳು ಅಭೂತಪೂರ್ವ ಮುನಿಯಾಲು ಶ್ರೀಮನ್ನಾಗಮಂಡಲದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

