ಸರಕಾರದ ಮುಂದಿರಿಸಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಕಾರ್ಕಳದ ಮಹಾಮಸ್ತಕಾಭಿಷೇಕಕ್ಕೆ ಸರಕಾರದ ವತಿಯಿಂದ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಫೆ. 25ರಂದು ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ನಂತರ ಕುಕ್ಕುಂದೂರು ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲ ಚುನಾವಣೆಯಲ್ಲಿ ಭರವಸೆ ನೀಡಿದ ಹೆಚ್ಚಿನ ಭರವಸೆಗಳನ್ನು ಈಡೇರಿಸಲಾಗಿದೆ. ಪಂಚಗ್ಯಾರಂಟಿ ಯೋಜನೆಗಳ ಮೂಲಕ ಬಡಜನರ ಕಷ್ಟಗಳಿಗೆ ಸ್ಪಂದಿಸಲಾಗಿದ್ದು, ಇದಕ್ಕಾಗಿ 52ಸಾವಿರ ಕೋಟಿಯನ್ನು ವ್ಯಹಿಸಲಾಗಿದೆ. ಜಾತಿ, ಧರ್ಮ, ಭೇದವಿಲ್ಲದೆ ಅರ್ಹರಿಗೆ ಸವಲತ್ತುಗಳನ್ನು ನೀಡಲಾಗಿದೆ ಎಂದರು.

ವೀರಪ್ಪ ಮೊಯಿಲಿಯವರು ದಿಕ್ಸೂಚಿ ಭಾಷಣ ಮಾಡಿ ರೈತಾಪಿ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಿಸಾನ್ ಸಭಾವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಟ್ರಸ್ಟ್ ಆಗಿ ಪರಿವರ್ತಿಸಿ ಆ ಮೂಲಕ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯನ್ನು ಹುಟ್ಟುಹಾಕಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬರಲಾಗುತ್ತಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ ಸಮಾನತೆ ಶಿಕ್ಷಣವನ್ನು ಪ್ರತಿಯೊಬ್ಬರಿಗೆ ಸಿಗುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಡಾ. ಹೆಚ್. ಸಿ. ಮಹಾದೇವಪ್ಪ ಮಾತನಾಡಿ ಅವಿಭಜಿತ ದ.ಕ. ಜಿಲ್ಲೆಯು ಶೈಕ್ಷಣಿಕವಾಗಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.

ಉಡುಪಿ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಕರಾವಳಿ ಭಾಗದಲ್ಲಿ 5ಕ್ಕೆ 5 ಕ್ಷೇತ್ರಗಳು ಬಿಜೆಪಿ ಶಾಸಕರಿದ್ದರೂ ಸರಕಾರದ ಪಂಚಗ್ಯಾರಂಟಿ ಯೋಜನೆಯ ಫಲಾನುಭವಿಗಳು ರಾಜ್ಯದಲ್ಲಿ ಅತೀ ಹೆಚ್ಚು ಮಂದಿ ಇದ್ದಾರೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ ಕರಾವಳಿಯಲ್ಲಿ ಕಲ್ಲುಗಣಿಗಾರಿಕೆ, ಮರಳು, ಮಣ್ಣು ಸಾಗಾಟ ಹಾಗೂ 9/11ನಲ್ಲಿ ಜನರು ತುಂಬಾ ಸಂಕಷ್ಟ ಪಡುತ್ತಿದ್ದಾರೆ. ಕಾನೂನನ್ನು ಸ್ವಲ್ಪ ಸಡಿಲಿಕೆ ತರುವಂತೆ ವಿನಂತಿಸಿದರು.

2027ರಲ್ಲಿ ಕಾರ್ಕಳದಲ್ಲಿ ಬಾಹುಬಲಿ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ಇದಕ್ಕಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ವಿನಂತಿಸಿದರು.

ಮುನಿಯಾಲು ಉದಯ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಹರ್ಷಮೊಯಿಲಿ ಸ್ವಾಗತಿಸಿದರು. ಉದಯ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ವಂದಿಸಿದರು.
