ರೈತ ವಿರೋಧಿ ನೀತಿಯಿಂದಾಗಿ ರೈತರ ಬದುಕು ಅತ್ಯಂತ ನಿಕೃಷ್ಟವಾದ ಸ್ಥಿತಿಗೆ ತಲುಪಿದೆ. ರೈತರು ಬೆಳೆದ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳಿಗೆ ಮೌಲ್ಯಧಾರಿತ ಬೆಲೆಯನ್ನು ನಿಗದಿಗೊಳಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಕಿಸಾನ್ ಸಂಘದ ಮೂಲಕ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ರೈತರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಮೇ 29ರಂದು ಮೂಡುಬಿದಿರೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ತಾಲೂಕು ಕಿಸಾನ್ ಪ್ರಮುಖರು ಮತ್ತು ಪ್ರಗತಿ ಪರ ಕೃಷಿಕರು ಜಾಯ್ಲಸ್ ಡಿಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ನಡೆಸುವುದು ಅತ್ಯಂತ ಕಷ್ಟದಾಯಕವಾಗಿದೆ. ಕೂಲಿಯಾಳುಗಳ ಸಮಸ್ಯೆ, ಬೆಲೆಗಳು ಗಗನಕ್ಕೇರಿರುವ ಸಂದರ್ಭದಲ್ಲಿ ರೈತರಿಗೆ ಸರ್ಕಾರದ ಪ್ರೋತ್ಸಾಹ ಧನ ಸೇರಿ ಕೇವಲ 42/- ರೂಪಾಯಿ ಲೀಟರ್ ಹಾಲಿಗೆ ನೀಡುತ್ತಿದ್ದಾರೆ. 1 ಲೀಟರ್ ಹಾಲಿನ ವೆಚ್ಚ ಕನಿಷ್ಟ 100/-ರೂಪಾಯಿಗೂ ಹೆಚ್ಚು ವೆಚ್ಚ ಆಗುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರತಿ ಲೀಟರ್ ಹಾಲಿಗೆ 65 ರೂ. ಹಣ ನಿಗದಿಗೊಳಿಸಬೇಕು ಮತ್ತು ಪ್ರೋತ್ಸಾಹ ಧನವಾಗಿ ಪ್ರತಿ ಲೀಟರ್ ಹಾಲಿಗೆ 15 ರೂಪಾಯಿ ಪ್ರೋತ್ಸಾಹಧನವನ್ನು ನೀಡಬೇಕೆಂಬುವುದು ರೈತರ ಬೇಡಿಕೆಯಾಗಿದೆ ಎಂದು ಹೇಳಿದರು.
ಅಕ್ರಮ -ಸಕ್ರಮ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ಹಲವಾರು ತಿದ್ದುಪಡಿಯಿಂದಾಗಿ ಕೃಷಿಕರಿಗೆ ಕೃಷಿ ಮಾಡಿದ ಆಸ್ತಿಯನ್ನು ಅವರಿಗೆ ಮಂಜೂರುಗೊಳಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಸಭಾ ವ್ಯಾಪ್ತಿಯ ಗಡಿಯಿಂದ ಟವರ್ ಲೋಕೇಷನ್ ಪ್ರಕಾರ 3 ಕಿ.ಮೀ ವ್ಯಾಪ್ತಿಯವರೆಗೆ ರೈತರಿಗೆ ಅಕ್ರಮ -ಸಕ್ರಮದಡಿಯಲ್ಲಿ ಯಾವುದೇ ಆಸ್ತಿ ಮಂಜೂರು ಮಾಡುವಂತಿಲ್ಲವೆಂಬ ಕಾಯ್ದೆ ತಿದ್ದುಪಡಿಯಾಗ ಬೇಕಾಗಿದೆ. ಅಕ್ರಮ ಸಕ್ರಮದಲ್ಲಿ ಡೀಮ್ಸ್ ಫಾರೆಸ್ಟ್ ಜಾಗವನ್ನು ರೈತರಿಗೆ ಮಂಜೂರು ಮಾಡುವಂತಿಲ್ಲವೆಂಬ ಆದೇಶ ಹೊರಡಿಸಿರುತ್ತಾರೆ.
ಈ ವಿಷಯಗಳಿಂದಾಗಿ ರೈತರಿಗೆ ಅಕ್ರಮ -ಸಕ್ರಮದಡಿಯಲ್ಲಿ ಆಸ್ತಿ ಮಂಜೂರು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ನಡೆಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ಪ್ರಕೃತಿ ವಿಕೋಪದಿಂದ ಅಡಿಕೆ ಮರ ನಾಶವಾದಾಗ ಒಂದು ಮರಕ್ಕೆ 20,000/-ರೂಪಾಯಿ, ತೆಂಗಿನ ಮರಕ್ಕೆ, ರಬ್ಬರ್ ಗಿಡಕ್ಕೆ 25,000/-ರೂಪಾಯಿ ಮತ್ತು ಇತರ ಕೃಷಿ ನಾಶವಾದಾಗ ವೈಜ್ಞಾನಿಕ ಮಾದರಿಯಲ್ಲಿ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಸರ್ಕಾರವು ಇತ್ತೀಚೆಗೆ ಕುಮ್ಮಿ ಆಸ್ತಿಯಲ್ಲಿಯೂ ತಿದ್ದುಪಡಿ ತಂದಿರುವುದರಿಂದ ರೈತರು ತೀವ್ರವಾದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಮಾಡಿದವನೇ ಕೃಷಿ ಭೂಮಿಯ ಒಡೆಯನೆಂದು ಘೋಷಿಸಬೇಕು ಹಾಗೂ ಕುಮ್ಕಿ ಆಸ್ತಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಮೇ29ರಂದು ಬೆಳಿಗ್ಗೆ10.00 ಘಂಟೆಗೆ ಮೂಡಬಿದ್ರಿ ಶ್ಯಾಮಿಲಿ ಎನ್‌ಪ್ಲೇವ್ ಕಟ್ಟಡ ಬಳಿಯಿಂದ ತಹಶೀಲ್ದಾರ್ ಕಛೇರಿಯವರೆಗೆ ರೈತರ ಪ್ರತಿಭಟನಾ ಜಾಥಾ ನಡೆಯಲಿದೆ.
ಪ್ರತಿಭಟನಾ ಜಾಥವನ್ನು ಉದ್ದೇಶಿಸಿ ವಕೀಲರು ಹಾಗೂ ರೈತ ಹೋರಾಟಗಾರರಾದ ಶಾಂತಿ ಪ್ರಸಾದ್ ಹೆಗ್ಡೆ ರವರು ರೈತರನ್ನು ಉದ್ದೇಶಿಸಿ ದಿಕ್ಕೂಚಿ ಭಾಷಣವನ್ನು ಮಾಡಲಿರುವರು ಎಂದು ಜಾಯ್ಲಸ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಉಪಾಧ್ಯಕ್ಷರು
ವಲೇರಿಯನ್ ಕುಟಿನ್ಹ, ತಾಲೂಕು ಪ್ರಧಾನ ಕಾರ್ಯದರ್ಶಿ, ವಸಂತ್ ಭಟ್ ಪಯ್ಯಾಡಿ, ಭಾ.ಕಿ.ಸಂಘ ಮಾರ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷರು ರಾಧಕೃಷ್ಣ ಶೆಟ್ಟಿ, ಕಡಂದಲೆ ಭಾ.ಕಿ.ಸಂಘ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಟ್ಯಾನ್, ತೆಂಕಮಿಜಾರು ಭಾ.ಕಿ.ಸಂಘ ಪ್ರಮುಖರು ನೇಮಿರಾಜ್ ಶೆಟ್ಟಿ ಭಾಗವಹಿಸಿದ್ದರು.
