ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯ್ರಾಪ್ತಿಯ ಪೊಸನೊಟ್ಟುವಿನಲ್ಲಿರುವ ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗೆ ಹೋಗುತ್ತಿರುವ ಅತೀ ಭಾರದ ವಾಹನಗಳಿಂದಾಗಿ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಹಾಗೂ ವಾಹನಗಳು ಹೋಗಲು ಸಾಧ್ಯವಾಗದೆ ಗ್ರಾಮಸ್ಥರು ಇದರ ವಿರುದ್ಧ ರೊಚ್ಚಿಗೆದ್ದ ಘಟನೆ ನಡೆದಿದೆ.


ಉಡುಪಿ – ಕಾರ್ಕಳ ಮುಖ್ಯ ರಸ್ತೆಯ ಕುಕ್ಕುಂದೂರು ಕೋಂಕೆ ಮನೆಯಿಂದ ಮೂಡುಕಿನ್ಯರಕಟ್ಟ ಮಾರ್ಗವಾಗಿ ಪೊಸನೊಟ್ಟು ಮೂಲಕ ಆನಂದಿ ಮೈದನಾದ ಬಳಿ ಕಾರ್ಕಳ – ನಕ್ರೆ ಮುಖ್ಯ ರಸ್ತೆ ಸಂಪರ್ಕ ರಸ್ತೆಯ ಮೂಡುಕಿನ್ಯರಕಟ್ಟ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಈ ರಸ್ತೆಯನ್ನು ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗಿತ್ತು. ನಕ್ರೆ, ಪೊಸನೊಟ್ಟು ಸೇರಿದಂತೆ ಇತರ ಭಾಗದ ಜನತೆಗೆ ಈ ರಸ್ತೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು.



ನಂತರ ಈ ರಸ್ತೆಯಲ್ಲಿ 40ಟನ್‌ಗ್ ಅಧಿಕ ತೂಕದ ಕಲ್ಲಿನ ಘನ ವಾಹನಗಳು ಸಂಚರಿಸಲು ಆರಂಭವಾಗಿ ರಸ್ತೆ ಹಾಳಾಗಿರುತ್ತದೆ. ಅಲ್ಲದೆ ಈ ಬಾರಿ ಮಳೆ ಆರಂಭವಾದಾಗ ಘನ ವಾಹನಗಳ ಭಾರಕ್ಕೆ ರಸ್ತೆ ಅಲ್ಲಲ್ಲಿ ಜಗ್ಗಿ ಹೊಂಡಗಳು ಬಿದ್ದು ಸಣ್ಣ ವಾಹನಗಳ ಸಂಚಾರಕ್ಕೆ, ನಡೆದುಕೊಂಡು ಹೋಗುವವರಿಗೆ ಅಸಾಧ್ಯವಾಗಿತ್ತು. ಅತಿ ದುಸ್ತರವಾದ ಈ ರಸ್ತೆಗೆ ಉಪಯೋಗವಾಗದ ಕಲ್ಲುಗಳನ್ನು ರಸ್ತೆಗೆ ಸುರಿದು ಸಾರ್ವಜನಿಕ ರಸ್ತೆಯನ್ನು ಮತ್ತಷ್ಟು ಹಾಳು ಮಾಡಿರುವುದರಿಂದ ಜನಾಕ್ರೋಶ ಬುಗಿಲೆದ್ದಿದೆ.

ಈ ರಸ್ತೆಯಲ್ಲಿ ಬೈಕ್, ರಿಕ್ಷಾ, ಕಾರುಗಳು ಸಂಚಾರಕ್ಕೆ ಅಸಾಧ್ಯವಾಗಿರುತ್ತದೆ. ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆಲವು ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗಳಿಂದ ಸಾಮಾನ್ಯ ಜನರಿಗೆ ಸಮಸ್ಯೆಯುಂಟಾಗುತ್ತಿದ್ದರೂ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
