ಕಾರ್ಕಳಹೆಬ್ರಿ

ಜಿಲ್ಲೆಯಲ್ಲಿ ಗುರುತಿಸಲಾದ ಬ್ಲ್ಯಾಕ್ ಸ್ಪಾಟ್ ಸ್ಥಳಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ . ಕೆ ವಿದ್ಯಾಕುಮಾರಿ

ಜಿಲ್ಲೆಯಲ್ಲಿ ರಸ್ತೆ ಅಪಘಾತವಾಗುವ ವಲಯಗಳನ್ನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಅಪಘಾತವಾಗುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ವೈಜ್ಞಾನಿಕ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಅಪಘಾತ ಮುಕ್ತ ವಲಯಗಳನ್ನಾಗಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.


ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯಲ್ಲಿ 2020 ರಿಂದ 22 ರ ವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತವಾದ ಸ್ಥಳಗಳನ್ನು 20 ಬ್ಲ್ಯಾಕ್ ಸ್ಪಾಟ್ ಗಳನ್ನಾಗಿ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಸುರಕ್ಷಿತಾ ನಿರ್ವಹಣೆ ಕಾಮಗಾರಿಗಳಾದ ಕಪ್ಪುಚುಕ್ಕೆ ಸ್ಥಳಗಳಲ್ಲಿ ಪಾದಚಾರಿಗಳ ಕ್ರಾಸಿಂಗ್ ಹಾಗೂ ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು, ಹೈಮಾಸ್ಟ್ ದ್ವೀಪಗಳು, ಬ್ಲಿಂಕರ್‍ಸ್‌ಗಳು, ರಸ್ತೆ ಬದಿಯಲ್ಲಿ ಮೆಟಲ್ ಕ್ರಾಸ್ ಬ್ಯಾರಿಯರ್‍ಸ್, ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಗಳಿಗೆ ಹಂಪ್ಸ್, ಫೂಟ್‌ಓವರ್ ಬ್ರಿಡ್ಜ್, ಕೆಲವು ಸ್ಥಳಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿ, ಎಂ.ಎಸ್ ರೈಲಿಂಗ್ಸ್, ಕಾಮಗಾರಿ ಕೈಗೊಳ್ಳಲು ಅವಶ್ಯಕತೆಗಳಿದ್ದು, ಇವುಗಳನ್ನು ಆದ್ಯತೆಯ ಮೇಲೆ ಶೀಘ್ರವಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


ವಾಹನ ಸವಾರರು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವಾಗ ತಪ್ಪದೇ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದಲ್ಲಿ ಹಾಗೂ ವೇಗಮಿತಿಯೊಳಗೆ ಸುಗಮವಾಗಿ ಸಂಚರಿಸಿದ್ದಲ್ಲಿ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಇದಕ್ಕೆ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.


ರಸ್ತೆಗಳಿಗೆ ಹಂಪ್ಸ್‌ಗಳನ್ನು ಅಳವಡಿಸುವಾಗ ವೈಜ್ಞಾನಿಕ ಮೆಜರ್‍ಸ್‌ಗಳನ್ನು ತೆಗೆದುಕೊಳ್ಳಬೇಕು ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಜನರ ಹಾಗೂ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ತಾತ್ಕಾಲಿಕವಾಗಿ ಪೂರಕ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಕುಂದಾಪುರ ಘಟಕದಿಂದ ಹೊರಡುವ ಗ್ರಾಮೀಣ ಸಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರಯಾಣಿಕರನ್ನು ಇಳಿಸಬಾರದು. ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರನ್ನು ಇಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.


ವಿವಿಧ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸುವುದರೊಂದಿಗೆ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕಿ ಜೆ.ಜಿ. ಶಾಂತಲಾ, ಪೌರಾಯುಕ್ತ ರಾಯಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಗಾಂಧಿ ಜಯಂತಿ ಪ್ರಯುಕ್ತ ಕೆಕೆಎಂಪಿಯಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

Madhyama Bimba

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

Madhyama Bimba

ಅ. 5-10 ರ ವರೆಗೆ, ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯ ವಿವಿಧೆಡೆ ಸಂಚಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More