Blog

ಜಿಲ್ಲೆಯ 272477 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ ಇದರ ನಿವಾರಣೆಗಾಗಿ ಆಗಸ್ಟ್ 10 ರಂದು ರಾಷ್ಟೀಯ ಜಂತುಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತಿದ್ದು, ಅಂದು ಜಿಲ್ಲೆಯ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆಲ್ಬೆಂಡಝೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು.

ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಒಟ್ಟು 2,72,477 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ ಉಪಸ್ಥಿತಿಯಲ್ಲಿ ನೀಡಲಾಗುವುದು. ಶಿಕ್ಷಕರು, ಬಿಸಿಯೂಟ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯವರಿಗೆ ಕೂಡಾ ಮಾತ್ರೆಯನ್ನು ನೀಡಲಾಗುತ್ತದೆ.

ಹೊಟ್ಟೆ ಹುಳಗಳ ತೊಂದರೆಯಿಂದ ರಕ್ತಹೀನತೆ, ಪೌಷ್ಠಿಕಾಹಾರದ ಕೊರತೆ ಉಂಟಾಗುತ್ತಿದ್ದು, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ತೊಂದರೆ ಕಾಣಿಸಿಕೊಳ್ಳಬಹುದು.
ಆಲ್ಬೆಂಡಝೋಲ್ ಮಾತ್ರೆ ನೀಡುವುದರಿಂದ ಹೊಟ್ಟೆ ಹುಳಗಳ ನಾಶವಾಗುತ್ತವೆ.

ಈ ಕಾರ್ಯಕ್ರಮದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಸ್ಷಿಯಲ್ ಸ್ಕೂಲ್, ಯಾಕೆ. ಐ.ಟಿ. ಐ, ಟೆಕ್ನಿಕಲ್ ಇನ್ಸ್ಟಿಟ್ಯೂಟ್, ನರ್ಸಿಂಗ್ ಕಾಲೇಜ್,. ಡಿಗ್ರಿ ಕಾಲೇಜ್ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಆಯಾಯ ಶಾಲೆ/ ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಆಲ್ಬೆಂಡಝೋಲ್ ಮಾತ್ರೆಗಳನ್ನು   ವಿತರಣೆ ಮಾಡಲಾಗುತ್ತಿದೆ.

1 ರಿಂದ 2 ವರ್ಷದೊಳಗಿನ ಮಕ್ಕಳಿಗೆ 1/2 ಮಾತ್ರೆ ಹಾಗೂ 2-19 ವರ್ಷದ ವಯಸ್ಸಿನವರಿಗೆ ಇಡೀ ಮಾತ್ರೆ ನೀಡಲಾಗುತ್ತಿದೆ. ಚಿಕ್ಕ ಮಕ್ಕಳಿಗೆ ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಸೇವಿಸಲು ಅಥವಾ ಚೀಪಿ ಸೇವಿಸುವಂತೆ ಕ್ರಮವಹಿಸಲು ತರಬೇತಿ ನೀಡಲಾಗಿದೆ. ಆಗಸ್ಟ್ 10 ರಂದು ಬಿಟ್ಟು ಹೋದ ಮಕ್ಕಳಿಗೆ ಆ. 17 ರ ಮೋಪ್ ಅಪ್ (Mop up) ದಿನದಂದು ಮಾತ್ರೆಗಳನ್ನು ನೀಡಲಾಗುವುದು. ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಆಲ್ಬೆಂಡಝೋಲ್ ಮಾತ್ರೆಯನ್ನು ನೀಡಲಾಗುತ್ತದೆ. ಬೇರೆ ಯಾವುದೇ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಆಲ್ಬೆಂಡಝೋಲ್ ಮಾತ್ರೆಯನ್ನು ಸೇವಿಸಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಶಾಲೆಯಿಂದ ಹೊರಗಿರುವ 1 ರಿಂದ 19 ವರ್ಷದ ಒಳಗಿರುವ ಮಕ್ಕಳನ್ನು ಪಟ್ಟಿ ಮಾಡಿ ಪಟ್ಟಿಯಲ್ಲಿರುವ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಮಾಡಿ ಮಾತ್ರೆ ನೀಡಲಾಗುತ್ತದೆ.

ನೈರ್ಮಲ್ಯತೆಯ ಕೊರತೆ, ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳ ಭಾದೆ ಬರುತ್ತದೆ. ಇದರಿಂದಾಗಿ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದ್ದು, ಜಂತುಹುಳ ಭಾದೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ತರಾಗಿ ಶಾಲೆಗಳಿಗೆ ಗೈರು ಹಾಜರಾತಿಯಾಗುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಾಗುತ್ತಾರೆ. ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗಬಹುದು.

ಜಂತುಹುಳ ಭಾದೆಯ ಲಕ್ಷಣಗಳು:ಯಾವ ಮಕ್ಕಳಲ್ಲಿ ಜಂತುಹುಳ ಸಂಖ್ಯೆ ಹೆಚ್ಚಿದೆಯೋ, ಆ ಮಕ್ಕಳಲ್ಲಿ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು, ತೂಕದಲ್ಲಿ ಇಳಿಕೆ, ವಾಕರಿಕೆ, ವಾಂತಿ, ರಕ್ತ ಹೀನತೆ ಇಂತಹ ಲಕ್ಷಣಗಳು ಕಂಡುಬರುತ್ತವೆ. ಜಂತುಹುಳ ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಲೂಬಹುದು.

ಜಂತುಹುಳ ಭಾದೆ ನಿವಾರಣೆಯ ಉಪಯೋಗಗಳು: ರಕ್ತಹೀನತೆಯನ್ನು ತಡೆಗಟ್ಟುವುದು, ಪೌಷ್ಠಿಕತೆಯಲ್ಲಿ ಸುಧಾರಣೆ,ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಏಕಾಗ್ರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿ ಸುಧಾರಿಸುವುದು.

ಜಂತುಹುಳ ಭಾದೆಯಿಂದ ರಕ್ಷಿಸಿಕೊಳ್ಳಲು ಕೈಗಳ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ಚಚ್ಛವಾಗಿಡಬೇಕು.
ಪಾದರಕ್ಷೆ ಧರಿಸಿ ಹೊರಗಡೆ ಓಡಾಡಬೇಕು.
ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು.
ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು. ಹಣ್ಣು, ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುಧ್ಧ ನೀರಿನಿಂದ ತೊಳೆಯಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿದಬೇಕು ಮಲವಿಸರ್ಜನೆಗೆ ಶೌಚಾಲಯವನ್ನೇ ಬಳಸುವದರಿಂದ ಹಾಗೂ ಆಹಾರ ಪದಾರ್ಥಗಳನ್ನು ಮುಚ್ಚಿಡುವುದರಿಂದ ಜಂತುಹುಳು ಭಾದೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related posts

ಕಾರ್ಕಳದಲ್ಲಿ ಆತ್ಮ ಪರಮಾತ್ಮ

Madhyama Bimba

ಕಾರ್ಕಳ ಜ್ಞಾನಸುಧಾ : ಶ್ರೀ ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ 

Madhyama Bimba

ಫೇಸ್ಬುಕ್ ಕಿರಿಕ್ – ಓರ್ವ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More