ಪಾಲಡ್ಕ ಗ್ರಾಮ ಪಂಚಾಯತ್‌ನ 2026–27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸರಕಾರಿ ಯೋಜನೆಗಳು, ಫಲಾನುಭವಿಗಳ ಆಯ್ಕೆ ಹಾಗೂ ಗ್ರಾಮಸ್ಥರ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಸಭೆ ಕಡಂದಲೆ ಪಲ್ಕೆ ಶ್ರೀ ಗಣೇಶ್ ದರ್ಶನ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಸುಚರಿತ ಶೆಟ್ಟಿ ಅವರು , ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ಗ್ರಾಮದಿಂದ ಬಂದವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಕಲ್ಲೋಳಿ ಪ್ರದೇಶದಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಶೀಘ್ರ ದುರಸ್ತಿ ಕೈಗೊಳ್ಳಬೇಕು ಎಂದು ಸುನೀಲ್ ಮಡಿಕೆ ಮನವಿ ಮಾಡಿದರು. ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸುವಂತೆಯೂ ಒತ್ತಾಯಿಸಿದರು.
ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ 2016ರ ರಾಜ್ಯಪತ್ರದ ಆದೇಶ ಉಲ್ಲಂಘಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥ ಭಾಸ್ಕರ್ ಆರೋಪಿಸಿದರು.
ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದರು. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಮಂಜುಳಾ ಹುನಗುಂದ ತಿಳಿಸಿದರು.
ಸಭೆಯಲ್ಲಿ ಹಿಂದಿನ ನಡವಳಿ, ಜಮಾ–ಖರ್ಚು, ವಾರ್ಡ್ ಸಭೆಗಳ ವರದಿ, ಕಾಮಗಾರಿಗಳು, ವಸತಿ–ನಿವೇಶನ ರಹಿತರ ಪಟ್ಟಿ, ‘ವಿಕಸಿತ ಭಾರತ’ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ ಹಾಗೂ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಅರ್ಜಿಗಳನ್ನು ಸ್ವೀಕರಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಹುನಗುಂದ, ಲೆಕ್ಕ ಸಹಾಯಕಿ ಮೋಹಿನಿ ಕುಮಾರಿ ಆಡಳಿತಾಧಿಕಾರಿ ಮಲ್ಲಿಕಾರ್ಜುನ, ಹಾಲುತ್ಪಾದಕರ ಸಂಘದ ನಿರ್ದೇಶಕ ಕೆ ಪಿ ಸುಚರಿತ ಶೆಟ್ಟಿ, ತಾಲೂಕು ಪಂಚಾಯತ್ ಕೆಡಿಪಿ ಸದಸ್ಯರಾದ ಟಿ ಎನ್ ಕೆಂಬಾರೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಗಣೇಶ್ ಆಚಾರ್ಯ , ಸಹಾಯಕ ನಿರ್ದೇಶಕ ರಾಯಪ್ಪ ಈಳಿಗೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
