ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಇದರ ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಸ್ಥಾಪಕಾಧ್ಯಕ್ಷ ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮವು ಆ.09 ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಅಮೃತೋತ್ಸವ ಕಟ್ಟಡದ ಹಾಲ್‌ನಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ. ಜೈರಾಜ್ ಬಿ. ರೈಯವರು ಸ್ವಾಗತಿಸಿ ತಮ್ಮ ಪ್ರಸ್ತಾವಿಕ ಮಾತಿನಲ್ಲಿ, ಇಂದು ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಬಂದವರು, ಒರ್ವರು ಮಾಜಿ ಸೇನಾಧಿಕಾರಿ, ಉದಯೋನ್ಮುಖ ರಾಜಕಾರಣಿ, ಇನ್ನೊರ್ವರು ಹಿರಿಯ ಮಹಿಳಾ ಪೋಲೀಸ್ ಅಧಿಕಾರಿ. ಇವರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದವರು. ಇವರುಗಳ ಸಾಧನೆಯಿಂದ ಮಂಬರುವ ಪೀಳಿಗೆಯಾದ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಸಾಧನೆ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.
ಸಮಾರಂಭದ ಉದ್ಘಾಟಕರಾದ ದ.ಕ. ಲೋಕಸಭಾ ಕ್ಷೇತ್ರದ, ಸಂಸದ ಕ್ಯಾ| ಬ್ರಿಜೇಶ್ ಚೌಟರವರು ಮಾತನಾಡುತ್ತಾ ವಿಕಿಸಿತ ರಾಷ್ಟ್ರವಾಗಿ ನಮ್ಮ ದೇಶವು ಮೂಡಿ ಬರಲು ಇಂದಿನ ನವ ಯುವಕ ಯುವತಿಯರ ಪ್ರಯತ್ನ ಸಾಧನೆಯು ಅಗತ್ಯ. ತಮ್ಮಂಥ ಪ್ರತಿಭಾವಂತರು ಭಾರತೀಯ ಸೈನಿಕ ಸೇವೆ, ಆಡಳಿತ ಸೇವೆ, ರಾಜಕೀಯ ಸೇವೆಗಳಲ್ಲಿ ತಮ್ಮನ್ನು ತೊಡಗಿಸಬೇಕು. ಇವತ್ತಿನ ದಿನಗಳಲ್ಲಿ ಅವಕಾಶಗಳಿಗೆ ಕೊರತೆಯಿಲ್ಲ. ವಿದ್ಯಾರ್ಥಿಗಳು ತಮ್ಮ ಗುರಿಯ ಕನಸನ್ನು ಬೆನ್ನಟ್ಟಿ ಅದನ್ನು ನನಸು ಮಾಡಿಕೊಳ್ಳಲು ತಮ್ಮ ಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಅದನ್ನು ಸಾಧಿಸಲು ಶ್ರಮವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿ, ಇಂತಹ ಪ್ರತಿಭಾ ಪುರಸ್ಕಾರ, ಗುರುತಿಸುವಿಕೆ ವಿದ್ಯಾರ್ಥಿಗಳಸಾಮಾಜಿಕ ಮತ್ತು ರಾಷ್ಟ್ರದ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಮಂಗಳೂರು ನಗರ ಪೋಲೀಸ್‌ನ ಸಂಚಾರ ಉಪವಿಭಾಗದ ಸಹಾಯಕ ಪೋಲೀಸ್ ಕಮೀಷನರ್ ಶ್ರೀಮತಿ ನಜ್ಮಾ ಫಾರೂಖಿಯವರು ಮಾತನಾಡುತ್ತಾ, ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಪಠನ ವಿಷಯಗಳಲ್ಲಿ ತಜ್ಞತೆಯನ್ನು ಪಡಕೊಂಡು, ಅದನ್ನೇ ತಮ್ಮ ವೃತ್ತಿಯಾಗಿ ಸ್ವೀಕರಿಸಿದಲ್ಲಿ ತಮ್ಮ ವೃತ್ತಿಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿ ವೃತ್ತಿಯಲ್ಲಿ ತೃಪ್ತಿಯನ್ನು ಪಡೆಯಲು, ಸಾಧನೆಯನ್ನು ಮಾಡಲು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರು ಹಾಗೂ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿಯವರ ಧರ್ಮಪತ್ನಿಯಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿ, ಅಳಿಯ ಡಾ| ಆಶಿತ್ ಹೆಗ್ಡೆ ಮತ್ತು ಮಗಳು ಶ್ರೀಮತಿ ವಿದ್ಯಾ ಹೆಗ್ಡೆಯವರು ಉಪಸ್ಥಿತರಿದ್ದು ೬ ವಿದ್ಯಾರ್ಥಿಗಳಿಗೆ ಅವರಿಂದ ಸ್ಥಾಪಿತ ಪ್ರತ್ಯೇಕ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ನಿರ್ದೇಶಕರುಗಳಾದ ಕೆ. ಸೀತಾರಾಮ ರೈ ಹಾಗೂ ಪಿ.ಬಿ. ದಿವಾಕರ ರೈ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳ ವ್ಯಕ್ತಿ ಪರಿಚಯವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ೧೧೪ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ರೂ.೧೩ ಲಕ್ಷದಷ್ಟು ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಪ್ರಸಾದ್ ಕೌಶಲ್ ಶೆಟ್ಟಿ, ಕುಂಬ್ರ ದಯಾಕರ ಆಳ್ವ, ಎ. ಚಿಕ್ಕಪ್ಪ ನಾಕ್, ಡಾ| ಬಿ. ಸಂಜೀವ ರೈ, ಮಹಾಪ್ರಬಂಧಕ ಗಣೇಶ್ ಜಿ.ಕೆ. ಉಪಸ್ಥಿತರಿದ್ದರು.
ನಿರ್ದೇಶಕರಾದ ಯಂ. ರಾಮಯ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು. ಹಿರಿಯ ವ್ಯವಸ್ಥಾಪಕಿ ಶ್ರೀಮತಿ ಸವಿತಾ ಎಸ್., ಉಪಾಧ್ಯಕ್ಷರ ಸಂದೇಶ ವಾಚಿಸಿದರು. ಶಾಖಾಧಿಕಾರಿ ಶ್ರೀಮತಿ ಅಶ್ವಿನಿ ಎಸ್. ಶೆಟ್ಟಿ ಪ್ರಾರ್ಥಿಸಿದರು. ವ್ಯವಸ್ಥಾಪಕರುಗಳಾದ ಶಮಂತ್ ಟಿ. ರೈ ಹಾಗೂ ಧನಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
