ಮೂಡುಬಿದಿರೆಯ ಉದ್ಯಮಿಯೋರ್ವರ ಬ್ಯಾಂಕ್ ಖಾತೆಯಿಂದ ಹಣ ವಸೂಲಿ ಮಾಡಲು ಹಿಂದಿ ಮಾತುಗಾರಿಕೆಯ ವ್ಯಕ್ತಿಯೋರ್ವ ಪ್ರಯತ್ನಿಸಿ ವಿಫಲವಾದ ಪ್ರಕರಣ ವರದಿಯಾಗಿದೆ.
ಇಂದು ಅಕ್ಟೊಬರ್ 5ನೇ ತಾರೀಕು ಮೂಡುಬಿದಿರೆ ಟಯರ್ ಉದ್ಯಮಿಯೋರ್ವರಿಗೆ ಹಿಂದಿ ಮಾತನಾಡುತ್ತಿರುವ ವ್ಯಕ್ತಿಯೋರ್ವ ಕರೆ ಮಾಡಿ ತನ್ನ ಲಾರಿಗೆ ಸೆಕೆಂಡ್‌ಹ್ಯಾಂಡ್ ಟ್ಯೂಬ್ ಒಂದನ್ನು ಹಾಕಿಕೊಡುವಂತೆ ಕೇಳಿಕೊಂಡಿದ್ದಾನೆನ್ನಲಾಗಿದೆ.
ಟ್ಯೂಬ್ ನ ಮೊತ್ತವನ್ನು ವಿಚಾರಿಸಿ ಯುಪಿಐ ಮೂಲಕ ಪಾವತಿಸುವ ಭರವೆಸೆಯಿತ್ತ ಆತ ಮೊದಲಿಗೆ 1 ರೂ. ಪಾವತಿಸಿದ ಮೆಸೇಜ್ ಕಳುಹಿಸಿ ಫೋನಾಯಿಸಿ ದೃಢೀಕರಿಸಿಕೊಂಡಿದ್ದ. ಈ ವಂಚನೆಯ ಬಗ್ಗೆ ತಿಳಿದುಕೊಂಡಿದ್ದ ಉದ್ಯಮಿ ಆತನ ಸಂಪೂರ್ಣ ಮಾತುಗಳನ್ನು ಕೇಳುತ್ತಾ ಸ್ಪಂದಿಸುವ ರೀತಿ ನಟಿಸಿದ್ದರು. ಆ ಕೂಡಲೇ ಮತ್ತೆ 5000 ರೂಪಾಯಿಯನ್ನು ಪಾವತಿಸಿದ ಮತ್ತೊಂದು ಮೆಸೇಜ್ ಅವರ ಮೊಬೈಲ್‌ಗೆ ಬಂದಿತ್ತು. ಮತ್ತೇ ಕರೆ ಮಾಡಿದ ನಯವಂಚಕ ತಪ್ಪಾಗಿ ಅಷ್ಟು ಮೊತ್ತ ಪಾವತಿಯಾಗಿರುವುದರಿಂದ ಅದನ್ನು ನನ್ನ ಸ್ಕ್ಯಾನರ್‌ಗೆ ವರ್ಗಾಯಿಸುವಂತೆ ಕೋರಿಕೊಂಡಿದ್ದ. ಉದ್ಯಮಿಯು ಲಾರಿ ಚಾಲಕನಲ್ಲಿ ನೀಡುವುದಾಗಿ ಹೇಳಿದ್ದರೂ ಕೇಳದೆ ಮತ್ತೇ ಸ್ಕ್ಯಾನರ್ ಕಳುಹಿಸಿಕೊಡುವ ಬಗ್ಗೆ ಮಾತನಾಡಿದ್ದ.
ಲಾರಿಯವ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ತುಂಬಿಸಲು ಲಾರಿಯನ್ನು ನಿಲ್ಲಿಸಿ ಹಣವಿಲ್ಲದೇ ಇರುವುದರಿಂದ ಅಲ್ಲಿಯೇ ಬಾಕಿಯಾಗಿದ್ದು ಈ ಹಣವನ್ನು ಆತನಿಗೆ ಕಳುಹಿಸಿ ಕೊಡಬೇಕಾಗಿದೆ ಎಂದೂ ವಂಚನೆಯ ಮಾತನಾಡಿದ್ದ ವಂಚಕ. ಆದರೆ ಉದ್ಯಮಿ ತನ್ನ ಚಾಣಾಕ್ಷತೆಯನ್ನೆ ಪ್ರದರ್ಶಿಸಿದ್ದರಿಂದ ಅವರ ಮೊಬೈಲ್‌ನಲ್ಲಿದ್ದ ಹಣ ಉಳಿಯಿತು. ಆದರೆ ವಂಚಕ ಒಂದು ರೂಪಾಯಿಯನ್ನು ಅವರಿಗೆ ಕಳುಹಿಸಿಕೊಟ್ಟಿಲ್ಲ.
ಇತೀಚೆಗೆ ಬೇಕರಿ ಉದ್ಯಮಿ ಓರ್ವರ ಮೊಬೈಲ್ ಗೆ 10ಸಾವಿರ ಹಣ ಕಳುಹಿಸಿದ್ದಾಗಿ ಹೇಳಿ ವಂಚಿಸಲು ಇದೇ ರೀತಿಯಲ್ಲಿ ಯತ್ನಿಸಿ ವಿಫಲ ಆದ ಎಚ್ಚರಿಕೆ ಸಂದೇಶ ವೈರಲ್ ಆಗಿತ್ತು.ಈ ನಯವಂಚನೆಯ ಜಾಲದ ಬಗ್ಗೆ ಅವರು ಮಾಧ್ಯಮಬಿಂಬಕ್ಕೆ ಮಾಹಿತಿ ನೀಡಿದ್ದರು. ಅಲ್ಲದೇ ಜನರು ಇಂತಹ ಹಣವಂಚನೆಯ ಜಾಲದ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಅವರು ವಿನಂತಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.