ಮೂಡುಬಿದಿರೆ ತಾಲೂಕು ಮಟ್ಟದ ದಲಿತ ಕುಂದುಕೊರತೆ ಸಭೆಗೆ ಪ್ರಮುಖ ಇಲಾಖಾ ಅಧಿಕಾರಿಗಳು ಗೈರುಹಾಜರಾಗುವ ಮೂಲಕ ದಲಿತ ಸಮಾಜವನ್ನು ಕಡೆಗಣಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಕರ್ನಾಟಕ ದಲಿತ ಸಂಘರ್ಷಸಮಿತಿ ಭೀಮ ಘರ್ಜನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕ ಸತೀಶ್ ಕಲ್ಲಮುಂಡ್ಕೂರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ದಲಿತ ಮುಖಂಡರ ವಿರೋಧದ ನಡುವೆಯೇ ಆಗಸ್ಟ್ 18ರಂದು ನಡೆದ ಸಭೆಯನ್ನು ತಹಸೀಲ್ದಾರ್ ಮುಂದುವರಿಸಿರುವುದಾಗಿ ಆರೋಪಿಸಿದರು.
ದಲಿತ ಕುಂದುಕೊರತೆ ಸಭೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕರಣಿಕರು ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕಾಗಿತ್ತು. ಆದರೆ ತಹಶೀಲ್ದಾರ್, ಅಬಕಾರಿ, ಕೃಷಿ, ಅರಣ್ಯ, ವೈದ್ಯಾಧಿಕಾರಿ, ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಹೊರತುಪಡಿಸಿ
ಪ್ರಮುಖ ಅಧಿಕಾರಿಗಳು ಸಭೆಗೆ ಗೈರುಹಾಜರಾಗಿದ್ದರು ಎಂದು ತಿಳಿಸಿದರು.
ಅಧಿಕಾರಿಗಳು ಹಾಜರಿರದೆ ದಲಿತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಸಮಿತಿಯ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದರೂ, ಹೊರ ನಡೆದರೂ ತಹಶೀಲ್ದಾರ್ ಸಭೆಯನ್ನು ಮುಂದುವರಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಅವಮಾನವಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಹಸೀಲ್ದಾರ್ ವಿಫಲರಾಗಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಕರಣಿಕರುಗಳು ಸರಿಯಾಗಿ ಲಭ್ಯವಾಗದೆ, ದೂರವಾಣಿ ಕರೆಗೂ ಸಿಗದೆ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ತೊಂದರೆಯಾಗುತ್ತಿದೆ ಎಂದು ಸಮಿತಿಯ ಸಂಘಟನಾ ಸಂಚಾಲಕ ಪ್ರವೀಣ್ ಮುರಗೋಳಿ ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಮನ್ನಾ ಭೂಮಿ ಅತಿಕ್ರಮಣ, ಹಕ್ಕುಪತ್ರ ವಿತರಣೆ, ರೇಷನ್ ಕಾರ್ಡ್ ರದ್ದತಿ ಹಾಗೂ ಆಸ್ಪತ್ರೆ ಮತ್ತು ಹಾಸ್ಟೆಲ್‌ಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ದಲಿತರು ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಹಿಂದೆ 2025ರ ನವೆಂಬರ್ 27ರಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗೂ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹಿಂದಿನ ಸಭೆಯ ಅನುಪಾಲನಾ ವರದಿಯಲ್ಲಿ ತಿಳಿಸಲಾಗಿತ್ತು. ಆದರೂ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ದಲಿತರ ಕುಂದುಕೊರತೆ ಸಭೆ ನಡೆಯಬೇಕಿದ್ದರೂ ದೀರ್ಘಕಾಲ ಸಭೆ ನಡೆಸಲಾಗಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ. ಕೇವಲ ನೋಟಿಸ್ ನೀಡಿ ಕ್ರಮ ಕೈಗೊಳ್ಳದಿರುವುದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಸಭೆಯ ಕುರಿತು ಹಿಂದೆ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಮನೆಮನೆಗೆ ಮುಂಚಿತವಾಗಿ ನೋಟಿಸ್ ತಲುಪಿಸಿ ಲಿಖಿತ ಸ್ವೀಕೃತಿ ಪಡೆಯಲಾಗುತ್ತಿತ್ತು. ಆದರೆ ಈಗ ಪತ್ರಿಕೆಗಳಲ್ಲಿ ಚಿಕ್ಕದಾಗಿ ಪ್ರಕಟಿಸಿ, ವಾಟ್ಸಾಪ್ ಸಂದೇಶಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದರಿಂದ ದಲಿತರು ಸಭೆಗೆ ಬಾರದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೊಣಾಜೆ ಆರೋಪಿಸಿದರು.
ಮಂಗಳವಾರ ನಡೆದ ಸಭೆಗೆ ಗೈರುಹಾಜರಾದ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರಿಗೆ ಜಂಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ. ತಾಲೂಕು ಆಡಳಿತದ ವಿರುದ್ಧ ಅಧಿಕೃತ ದೂರು ಸಲ್ಲಿಸಲಾಗುವುದು. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಎಲ್ಲ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ತೀವ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಉದಯ ಮಾರ್ನಾಡ್, ಸದಸ್ಯ ಚಂದ್ರಶೇಖರ್ ಜಿ.ಪಿ. ಉಪಸ್ಥಿತರಿದ್ದರು.
