ಕಾರ್ಕಳ

ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನಸಾಮಾನ್ಯರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? – ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ

ಕಾರ್ಕಳ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ರಾಮೀಣ ಜನತೆಯ ಹಾಗೂ ಬಡವರ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ಜನಹಿತವನ್ನು ಸಂಪೂರ್ಣವಾಗಿ ಮರೆತಿರುವ ಈ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನಸಾಮಾನ್ಯರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?

ಈ ಜಡ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಅಕ್ಟೋಬರ್ ೫ರ ಸೋಮವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಬೈಲೂರು ಸೇರಿದಂತೆ ತಾಲೂಕಿನ ಸಮಸ್ತ ಜನತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ ಕರೆ ನೀಡಿದರು. ಅಕ್ಟೋಬರ್ ೫ರಂದು ನಡೆಯಲಿರುವ ಬಿಜೆಪಿ ಬೃಹತ್ ಪ್ರತಿಭಟನೆಯ ಪೂರ್ವಭಾವಿಯಾಗಿ ಬೈಲೂರಿನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ತರುತ್ತಿರುವ ಅವೈಜ್ಞಾನಿಕ ತಂತ್ರಾಂಶ ನಿಯಮಗಳು ಮತ್ತು ಕಠಿಣ ಸುತ್ತೋಲೆಗಳು ನೇರವಾಗಿ ಜನಸಾಮಾನ್ಯರ ದೈನಂದಿನ ಬದುಕನ್ನು ತಟ್ಟುತ್ತಿವೆ. ಜನರು ಕಚೇರಿಗಳಿಗೆ ಅಲೆದು ಬೇಸತ್ತು ಹೋಗಿದ್ದರೂ ಆಡಳಿತ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮಾತನಾಡಿ, ಸಾಮಾನ್ಯ ಜನರಿಗೆ ಸ್ವಂತ ಜಾಗದಲ್ಲೊಂದು ಸೂರು ಕಟ್ಟಿಕೊಳ್ಳಲು ಇ-ಸ್ವತ್ತು, 9/110 ಖಾತಾ ಮತ್ತು ಏಕವಿನ್ಯಾಸ (ಸಿಂಗಲ್ ಲೇಔಟ್) ಅನುಮೋದನೆಯ ಹೆಸರಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಿನನಿತ್ಯ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಜಾಗದ ದಾಖಲೆಗಳಿಲ್ಲದ ಬಡವರ ಮನೆಗಳನ್ನು ಇ-ಸ್ವತ್ತು ತಂತ್ರಾಂಶದಿಂದಲೇ ಹೊರಹಾಕಲು ಹೊರಟಿರುವ ಈ ಸರ್ಕಾರ ಜನಸಾಮಾನ್ಯರ ನೆಮ್ಮದಿಯನ್ನು ಕಸಿದುಕೊಂಡಿದೆ. ಕಾರ್ಕಳವೊಂದರಲ್ಲೇ ಬಡ ಕುಟುಂಬಗಳ 1000ಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಅನ್ಯಾಯವಾಗಿ ರದ್ದುಗೊಳಿಸಲಾಗಿದೆ. ಹೊಸ ರೇಷನ್ ಕಾರ್ಡ್ ಪಡೆಯಲು ಪೋರ್ಟಲ್ ಬಂದ್ ಮಾಡಲಾಗಿದೆ. ಸಣ್ಣ-ಪುಟ್ಟ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿದ್ದ ರೈತರು ಹಾಗೂ ಬಡವರು ಸಲ್ಲಿಸಿದ್ದ 10090ಕ್ಕೂ ಹೆಚ್ಚು ಅಕ್ರಮ-ಸಕ್ರಮ ಅರ್ಜಿಗಳನ್ನು ಕ್ಯಾರೇ ಎನ್ನದೆ ತಿರಸ್ಕರಿಸಲಾಗಿದೆ. ವಿದ್ಯುತ್ ದರವನ್ನು ಬೇಕಾಬಿಟ್ಟಿ ಏರಿಸಿ, ಅಘೋಷಿತ ಲೋಡ್ ಶೆಡ್ಡಿಂಗ್ ಹೇರಿ ಗ್ರಾಮೀಣ ಭಾಗದ ಜನರಿಗೆ ಕತ್ತಲೆಯ ಭಾಗ್ಯ ಕರುಣಿಸಲಾಗಿದೆ.

ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರದ ನಿದ್ದೆಗೆಡಿಸಲು ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ರೂಪಿಸಲಾಗಿದೆ. ಪ್ರತಿಯೊಬ್ಬ ನಾಗರಿಕರು, ಕೃಷಿಕರು, ಸಂತ್ರಸ್ತ ಕುಟುಂಬಗಳು ಹಾಗೂ ಕಾರ್ಯಕರ್ತರು ಪಕ್ಷಾತೀತವಾಗಿ ಅಕ್ಟೋಬರ್ ೫ರ ಸೋಮವಾರ ಬೆಳಗ್ಗೆ 10.00 ಗಂಟೆಗೆ ಕಾರ್ಕಳ ತಾಲೂಕು ಕಚೇರಿ ಮುಂಭಾಗ ನಡೆಯುವ ಬೃಹತ್ ಧರಣಿಗೆ ಕೈಜೋಡಿಸಬೇಕು” ಎಂದು ಮಹಾವೀರ ಹೆಗ್ಡೆ ಸಾರ್ವಜನಿಕ ಸಭೆಯಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್ ವಿ, ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಸುಮಿತ್ ಶೆಟ್ಟಿ ಕೌಡೂರು , ರವೀಂದ್ರ ಕುಮಾರ್, ಸಂದೀಪ್ ಪಳ್ಳಿ , ಅಂತೋನಿ ಡಿ ಸೋಜ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಗೋಲ್ಡ್ ಲೋನ್ ನಲ್ಲಿ ಪ್ರತಿ ಗ್ರಾಂಗೆ ರೂ. 9500 ಸಾಲ

Madhyama Bimba

ಕೆರ್ವಾಶೆ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Madhyama Bimba

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಆಯ್ಕೆ ಅನಧಿಕೃತ: ದಲಿತ ಸಂಘಟನೆ ಮುಖಂಡರ ಆಕ್ಷೇಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More