ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದಾನಿಗಳ ನೆರವಿನೊಂದಿಗೆ ಮೂಡುಮಾರ್ನಾಡ್‌ನಲ್ಲಿ ಸುಮಾರು ₹12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮನೆಯನ್ನು ಸೆ. 6ರಂದು ಹಸ್ತಾಂತರಿಸಲಾಯಿತು. ಮನೆಯ ವಾರಿಸುದಾರರಿಗೆ ಕೀ ಹಸ್ತಾಂತರಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ , “ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು, ಸ್ವಾಭಿಮಾನದ ಬದುಕು ಕಲ್ಪಿಸಿರುವ ಯುವವಾಹಿನಿಯ ಸಮಾಜಮುಖಿ ಕಾರ್ಯ ಅರ್ಥಪೂರ್ಣವಾಗಿದೆ. ಮಾನವ ಜನ್ಮದ ಸಾರ್ಥಕತೆಗೆ ಇಂತಹ ಸೇವಾ ಕಾರ್ಯಗಳು ಅಗತ್ಯ ಎಂದರು.
ಆರ್ಥಿಕವಾಗಿ ಹಿಂದುಳಿದ ಹಾಗೂ ಅಶಕ್ತ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಬದುಕಿನಲ್ಲಿ ಭರವಸೆ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಮಾನವ ಸೇವೆಯೇ ನಿಜವಾದ ದೇಶ ಸೇವೆ ಎಂದು ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ ಹೇಳಿದರು.
ದೀಪ ಬೆಳಗಿಸಿ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಅಗತ್ಯವಿರುವ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಿ, ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಸೇವಾ ಕಾರ್ಯಗಳು ಸಂಘಟನೆಯ ಮೂಲ ಆಶಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಮನೆ ನಿರ್ಮಾಣದ ನೇತೃತ್ವ ವಹಿಸಿದ್ದ ಘಟಕದ ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಶ್ರೀಕ್ಷೇತ್ರ ಹೋಯ್ಪಾಲಬೆಟ್ಟದ ಅನುವಂಶಿಕ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಮೂಡುಮಾರ್ನಾಡ್ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ,, ಮೂಡುಬಿದಿರೆ ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಪಾಪಣ್ಣ ಪೂಜಾರಿ ಗುಮಡಬೆಟ್ಟು, ಮೂಡುಬಿದಿರೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ ಮೂಡುಬಿದಿರೆ ಘಟಕದ ಸಮಾಜ ಸೇವಾ ನಿರ್ದೇಶಕ ಉಮೇಶ್ ಕೋಟ್ಯಾನ್, ಕಾರ್ಯದರ್ಶಿ ಮೇಘನಾ, ಕೋಶಾಧಿಕಾರಿ ಜಯಶೀಲಾ ಪೂಜಾರಿ ಹಾಗೂ ಸುಮಿತ್ರಾ ವಿಶ್ವನಾಥ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆ ಕು. ಸುನೀಕ್ಷಾ ಮತ್ತುಕು.ಗಾನವಿ ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಪರಿಚಯಿಸಿ ಗೌರವಿಸಿದರು . ರಾಮ್ ಕುಮಾರ್ ಮೂಡುಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.
