ಪ್ರಮುಖ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ, ಮೆಸ್ಕಾಂ, ತಹಶೀಲ್ದಾರ್ ಮುಂತಾದ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯಿಂದಾಗಿ ಪುತ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಇಂದು ನಡೆಯಬೇಕಾಗಿದ್ದ ಗ್ರಾಮಸಭೆಯನ್ನು ಗ್ರಾಮಸ್ಥರ ಬಹುಮತದ ಬೆಂಬಲದೊಂದಿಗೆ ಮುಂದೂಡಲಾಯಿತು.
ಗ್ರಾಮಸಭೆ ಪ್ರಾರಂಭಿಸಲು ನೋಡೆಲ್ ಅಧಿಕಾರಿ ಪಂಚಾಯತ್‌ದ ಆಡಳಿತಾಧಿಕಾರಿ ಶ್ರೀಮತಿ ಲಿಡ್ವಿನ್ ಫೆನಾಂಡಿಸ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ ಬಿ. ಮುಂದಾಗುತ್ತಿದ್ದಂತೆ ಗ್ರಾಮಸ್ಥರಾದ ರಾಜೇಶ್ ಕಡಲಕೆರೆ, ಗಣಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆಗೆ ಗೈರು ಹಾಜರಾಗಿದ್ದನ್ನು ಪ್ರಶ್ನಿಸಿದರು. ಗಣಿ ಇಲಾಖೆಯ ಅಧಿಕಾರಿ ಶ್ರಾವಣಿ ತದನಂತರ ಆಗಮಿಸಿದರಾದರೂ ಉಳಿದ ಅಧಿಕಾರಿಗಳ ಗೈರು ಹಾಜರಾತಿಯನ್ನು ಪ್ರಶ್ನಿಸಿದರು. ಈ ನಡುವೆ ಪಂಚಾಯತ್ ಮಾಜಿ ಅಧ್ಯಕ್ಷ ಶಶಿಧರ ನಾಯಕ್ ಅವರು ತಹಶೀಲ್ದಾರ್ ಆಗಮನಕ್ಕೆ ಬೇಡಿಕೆಯಿಟ್ಟರು. ಗ್ರಾಮಕರಣಿಕರ ಉಪಸ್ಥಿತಿ ಇದ್ದರೂ ತಹಶೀಲ್ದಾರ್ ಬರಬೇಕಾದ ಅಗತ್ಯವನ್ನು ಅವರು ತಿಳಿಸಿದರು.
ಪಂಚಾಯತ್‌ರಾಜ್, ಆರೋಗ್ಯ ಇಲಾಖೆ, ಅಂಗನವಾಡಿ, ತೋಟಗಾರಿಕೆ ಮುಂತಾದ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಗ್ರಾಮಸ್ಥರಾದ ರೋಶನ್ ಸಂಪಿಗೆ, ವಾಸುದೇವ ನಾಯಕ್, ನಝೀರ್ ಮುಂತಾದವರು ಹಲವು ಬೇಡಿಕೆಗಳಿಗೆ ಉತ್ತರಿಸಲು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಗಮನಿಸಲಾಯಿತು. ನಂತರ ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮಸಭೆ ಮುಂದೂಡಲಾಯಿತು.
