Blog

ಕೆ. ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ

 

ಮೂಡುಬಿದಿರೆ: ಕಂಬಳ ಕ್ರೀಡೆಯಲ್ಲಿ ಹಲವು ದಶಕಗಳಿಂದ ತೊಡಗಿಕೊಂಡು ಈ ಜಾನಪದ ಕ್ರೀಡೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ ಕಂಬಳದ ಭೀಷ್ಮರೆಂದೇ ಖ್ಯಾತಿವೆತ್ತ ಕೆ. ಗುಣಪಾಲ ಕಡಂಬ ಅವರಿಗೆ ಮೂಡುಬಿದಿರೆಯ ಸಮಾಜ ಮಂದಿರ ಸಭಾ ತನ್ನ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮೂಡುಬಿದಿರೆಯ ಸಾಧಕರಿಗೆ ನೀಡಲಾಗುವ 2026 ನೇ ಸಾಲಿನ ಸಮಾಜ ಮಂದಿರ ಪುರಸ್ಕಾರವನ್ನು ಘೋಷಿಸಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಕೃಷಿ ಪ್ರಧಾನ ಕೊಳಕೆ ಇರ್ವತ್ತೂರು ಮನೆತನದ ಕೆ .ಗುಣಪಾಲ ಕಡಂಬ (1947) ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು. ಡಿ.ವಿ.ಎಸ್ ಕಾಲೇಜಿನ ಎನ್ ಸಿ ಸಿ ಕೆಡೆಟ್ ಆಗಿ ಗಣರಾಜ್ಯೋತ್ಸವ ಪೆರೇಡಲ್ಲಿ ಪಾಲ್ಗೊಂಡ ಪ್ರತಿಭಾವಂತ. ಎಳವೆಯಿಂದಲೇ ಕನ್ನಡ ಭಾಷಾ ವಾಗ್ಮಿಯಾಗಿ ಬೆಳೆದವರು. ಮೂಡುಬಿದಿರೆಯ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಮೂರು ದಶಕಗಳಿಗೂ ಮೀರಿದ ಸೇವೆಯಲ್ಲಿ ಸಹಸ್ರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿದವರು. 2005ರಲ್ಲಿ ಪ್ರಾಚಾರ್ಯರಾಗಿ ನಿವೃತ್ತಿಯ ಬಳಿಕವೂ ಶಿರ್ಲಾಲಿನಲ್ಲೂ ಶೈಕ್ಷಣಿಕವಾಗಿ ಸಕ್ರಿಯರು.

ಉದ್ಘೋಷಕರಾಗಿ ಕಂಬಳದಲ್ಲಿ ಕಾಣಿಸಿಕೊಂಡ ಕಡಂಬ ಕಂಬಳ ಮತ್ತು ಕಡಂಬ ಒಂದೇ ನಾಣ್ಯದ ಎರಡು ಮುಖಗಳು ಎಂಬಂತೆ ಬೆಳೆದ ಸಾಧಕ. ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ ಎರಡು ದಶಕಗಳಿಗೂ ಮಿಕ್ಕಿದ ಸೇವೆ, ಕಂಬಳ ಅಕಾಡೆಮಿ (2011) ರೂಪಿಸಿ ಸಮಗ್ರ ಕಂಬಳ ನೀತಿ ,ತೀರ್ಪಿನಲ್ಲಿ ಪಾರದರ್ಶಕತೆ, ಓಟಗಾರರಿಗೆ ತರಬೇತಿ ಹೀಗೆ ಕಂಬಳಕ್ಕೆ ಶಿಸ್ತಿನ ಚೌಕಟ್ಟು ರೂಪಿಸಿದ ಕಂಬಳ ಲೋಕದ ಭೀಷ್ಮ. ಶಿಕ್ಷಣ ,ಕ್ರೀಡೆ ,ಕೃಷಿ, ಧರ್ಮ ಸಂಸ್ಕೃತಿ ಹೀಗೆ ಎಂಬತ್ತರ ಹರೆಯದಲ್ಲೂ ಸಕ್ರಿಯರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದಸರಾ ಗೌರವ, ಕ್ರೀಡಾ ಪೋಷಕ ..ಮೊದಲಾದ ಗೌರವಾದರಗಳಿಗೆ ಪಾತ್ರರಾಗಿರುವ ಮೇರು ಸಾಧಕ ಗುಣ ಪಾಲ ಕಡಂಬರನ್ನು 2026 ನೇ ಸಾಲಿನ ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ಅಕ್ಟೋಬರ್ 11 ರಿಂದ ಐದು ದಿನಗಳ ಕಾಲ ಸಮಾಜ ಮಂದಿರದಲ್ಲಿ ನಡೆಯಲಿರುವ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಸಮಾಜ ಮಂದಿರ ಗೌರವ – 2026 ಪುರಸ್ಕೃತರು: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಮೂಡುಬಿದಿರೆಯ ಸಾಧಕರುಗಳಿಗೆ ನೀಡಲಾಗುವ ಸಮಾಜ ಮಂದಿರ ಗೌರವವನ್ನು ಈ ಬಾರಿ 12 ಮಂದಿಗೆ ನೀಡಲಾಗುತ್ತಿದ್ದು ವಿವರಗಳು ಈ ಕೆಳಗಿನಂತಿವೆ.
1. ಡಾ. ಸರಸ್ವತಿ ಭಟ್ ( ವೈದ್ಯಕೀಯ), 2.  ಜೆ. ಜೆ.ಪಿಂಟೋ ( ಶಿಕ್ಷಣ) ,3.   ರಾಜಾರಾಮ್ ನಾಗರಕಟ್ಟೆ ( ಸಾಂಸ್ಕೃತಿಕ,4.   ಪಾಂಡುರಾಜ್ ( ಗೃಹ ರಕ್ಷಕ ದಳ ) 5.   ಅನುಷಾ ಪ್ರಜ್ವಲ್ ಆಚಾರ್ ( ಜೌಷದೀಯ ಆಹಾರ), 6.   ಹರೀಶ್ ಪಿ. ( ನ್ಯಾಯವಾದಿ),7. ರೇಮಂಡ್ ತಾಕೋಡೆ ( ಮಾಧ್ಯಮ, ಸಾಹಿತ್ಯ),8. ಜಯಂತಿ ಎಸ್. ಬಂಗೇರ ( ಸಾಹಿತ್ಯ ) , 9.   ಅಬುಲಾಲ ( ಉದ್ಯಮ, ಸಮಾಜ ಸೇವೆ), 10.   ಅಣ್ಣಿ ಸುವರ್ಣ ( ವಾದ್ಯ ಕಲೆ), 11.   ಸತೀಶ್ ಬಂಗೇರ ( ಆರ್ಥಿಕ, ಸಾಮಾಜಿಕ ಸೇವೆ) ,12.   ಎಂ. ಶ್ರೀನಿವಾಸ ಕಿಣಿ ( ಸಮಾಜ ಸೇವೆ)

Related posts

ಸುಬ್ರಮಣ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ಕಾರ್ಕಳ ತಂಡ

Madhyama Bimba

ಕಾರ್ಕಳ: ಕಣಜದ ಹುಳು ದಾಳಿ: ಮಹಿಳೆ ಸಾವು  

Madhyama Bimba

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More