ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಮೂಡುಬಿದಿರೆ ವಲಯದ ವತಿಯಿಂದ ಸದಸ್ಯರಿಗಾಗಿ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ನಡೆಸಲಾಯಿತು.
ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪ್ರಸಾದ್ ಜತ್ತನ್ ಉಡುಪಿ ಅವರು ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಲಯದ ಸದಸ್ಯರಿಗೆ ಮೌಲ್ಯಯುತ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಛಾಯಾಚಿತ್ರಗಳನ್ನು ಯಾವ ರೀತಿಯಾಗಿ ಆಯ್ಕೆ ಮಾಡಬೇಕು ಮತ್ತು ಅವುಗಳನ್ನು ಸ್ಪರ್ಧೆಗಳಿಗೆ ಹೇಗೆ ಕಳುಹಿಸಿಕೊಡಬಹುದು ಎನ್ನುವುದರ ಕುರಿತು ಸದಸ್ಯರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಜೊತೆಗೆ, ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳನ್ನು ಯಾವ ಯಾವ ವಿಭಾಗಗಳಲ್ಲಿ (ಕೆಟಗರಿಗಳಲ್ಲಿ) ಆಯೋಜಿಸಲಾಗುತ್ತದೆ, ಇದರಿಂದ ಸದಸ್ಯರಿಗೆ ಸಿಗುವ ಲಾಭಗಳೇನು ಹಾಗೂ ಸ್ಪರ್ಧೆಯಲ್ಲಿರುವ ವಿವಿಧ ಹಂತಗಳ ಬಗ್ಗೆ ಪ್ರಸಾದ್ ಜತ್ತನ್ ಅವರು ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ನಿತಿನ್ ಬೆಳ್ವಾಯಿ ಸ್ವಾಗತ ಕೋರಿದರು. ಕಾರ್ಯಾಗಾರದಲ್ಲಿ ವಲಯದ ಪ್ರಧಾನ ಕಾರ್ಯದರ್ಶಿ ನಮಿತ್ ಬಂಗೇರಾ, ಛಾಯಾ ಕಾರ್ಯದರ್ಶಿ ಸತೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಕೋಟ್ಯಾನ್ ಸೇರಿದಂತೆ ವಲಯದ ಸದಸ್ಯರು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
