ಮೂಡುಬಿದಿರೆ ಹೃದಯ ಭಾಗದಲ್ಲಿ ನಿರ್ಮಾಣ ಹಂತದ ಮಾರುಕಟ್ಟೆ ಕಟ್ಟಡಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಪುರಸಭೆಗೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವಂತೆ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ.
ಮೂಡುಬಿದಿರೆ ಪುರಸಭೆಯು ಪುರಾತತ್ವ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯದೆ 26 ಕೋಟಿ ಅಂದಾಜು ಮೊತ್ತದ ಮಾರುಕಟ್ಟೆ ಕಾಮಗಾರಿಯನ್ನು ನಡೆಸಲು ಯೋಜನೆ ರೂಪಿಸಿ ಕೆಲಸ ಪ್ರಾರಂಭ ಮಾಡಿತ್ತು. ಈ ವಿಷಯ ಅರಿತ ಅರ್ಜಿದಾರ ಜೈಸನ್ ತಾಕೊಡೆ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅವರ ವಾದವನ್ನು ಪರಿಗಣಿಸಿ, ಕೂಡಲೇ ಮಾರ್ಕೆಟ್ ಕಾಮಗಾರಿಯನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.
ಮಧ್ಯಂತರ ಆದೇಶದಲ್ಲಿಯೇ ಪುರಸಭೆ ಕಾನೂನು ಮೀರಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಇದೀಗ ಅಂತಿಮ ತೀರ್ಪಿನಲ್ಲಿಯೂ ಕರ್ನಾಟಕ ಉಚ್ಚ ನ್ಯಾಯಾಲಯವು ಮೂಡುಬಿದಿರೆ ಪುರಸಭೆಗೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವಂತೆ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಹೊಂದಿದ್ದ ಪುರಸಭೆ, ಕಾನೂನು ಪಾಲಿಸಬೇಕಾದ ಅಧಿಕಾರಿಗಳೇ ಕಾನೂನನ್ನು ಗಾಳಿಗೆ ತೂರುವ ಪ್ರಯತ್ನಕ್ಕೆ ಈ ಆದೇಶ ಚಾಟಿ ಬೀಸಿ ದಂತಾಗಿದೆ.
ಪುರಸಭೆ ಕಾನೂನಿನ ಎದುರು ಮಂಡಿಯೂರು ವಂತಾಗಿದೆ ಎಂದು ದೂರುದಾರ ಜೈಸನ್ ತಾಕೊಡೆ ಅಭಿಪ್ರಾಯ ಪಟ್ಟಿದ್ದಾರೆ.
ಇದರಿಂದಾಗಿ ಹಲವಾರು ವರ್ಷಗಳಿಂದ ಬೇಕಾಬಿಟ್ಟಿ ತಮ್ಮಿಷ್ಟದಂತೆ ಕಟ್ಟಡಗಳಿಗೆ ಅನುಮತಿ ನೀಡುತ್ತಿದ್ದ ಪುರಸಭೆಗೆ ಹೈಕೋರ್ಟ್ ತಕ್ಕ ಪಾಠ ಕಲಿಸಿದೆ.
ಈ ಪ್ರಕರಣದ ಮೂಲಕ ಮೂಡುಬಿದಿರೆ ನಗರದಲ್ಲಿ ಪುರಾತತ್ವ ಇಲಾಖೆಯ ನಿರಕ್ಷೇಪಣಾ ಪತ್ರ ಪಡೆಯದೆ ನಿರ್ಮಿಸಲಾಗಿದ್ದ ನೂರಾರು ಕಟ್ಟಡಗಳ ಮಾಹಿತಿಯೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಪುರಸಭೆಯ ಬಣ್ಣ ಬಯಲಾದಂತಾಗಿದೆ ಎಂದು ಹೇಳಲಾಗಿದೆ.
ನ್ಯಾಯಾಲಯದ ಸಂಪೂರ್ಣ ಆದೇಶದ ಪ್ರತಿ ಸಿಕ್ಕ ಮೇಲೆ ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು
ಜೈಸನ್ ತಾಕೊಡೆ
ಅಭಿಪ್ರಾಯ ಪಟ್ಟಿದ್ದಾರೆ.