ಮೂಡುಬಿದಿರೆ: ಅಂಗನವಾಡಿ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಕರ್ನಾಟಕ ಸರಕಾರದ ಆರನೇ ಗ್ಯಾರಂಟಿ ಯನ್ನು ಜಾರಿಗೊಳಿಸಲು ಮುಖ್ಯಮಂತ್ರಿಯವರಲ್ಲಿ ಮಾತುಕತೆ ನಡೆಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಭರವಸೆಯಿತ್ತರು.
ಮೂಡುಬಿದಿರೆ ಪ್ರೀತಮ್ ಹಾಲ್ ನಲ್ಲಿ ಮಿಥುನ್ ರೈ ಅಭಿಮಾನಿ ಬಳಗ ಅವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಅ 4ರಂದು ಏರ್ಪಡಿಸಿದ ತಾಲೂಕಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಗೌರವ ಸನ್ಮಾನ ಹಾಗೂ ವಿವಿಧ ಸ್ಪರ್ಧ ಕಾರ್ಯಕ್ರಮದ ಸಮಾರಂಭದಲ್ಲಿ ಅವರು ಮಾತನಾಡಿದರು. ಸರಕಾರದೊಂದಿಗೆ ಕೈ ಜೋಡಿಸಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ನಡೆಸಿದ ಶ್ರಮಕ್ಕೆ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ರಾಜಕೀಯಕ್ಕಾಗಿ ಹುಟ್ಟುಹಬ್ಬ ಆಚರಣೆ ನಡೆಸುವುದಿಲ್ಲ. ತನ್ನ ಕಾರ್ಯಕ್ರಮವನ್ನು ನೋಡಿಯಾದರೂ ಉಳಿದ ರಾಜಕಾರಣಿಗಳು ಗ್ರಾಮ್ಯ ಭಾಗದ ಸಮಾಜಮುಖಿ ಕಾರ್ಯಕರ್ತರನ್ನು ಗುರುತಿಸುವಂತಾಗಲಿ ಎಂದ ಅವರು ಅಗತ್ಯ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ತಮ್ಮನ್ನು ಭೇಟಿಯಾದಾಗ ಅವರ ಕೆಲಸವನ್ನು ನಡೆಸಿ ಕೊಡುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು.
ಮಾಜಿ ಸಚಿವ ಕೆ ಅಭಯ ಚಂದ್ರ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಮರ್ಥ ನಾಯಕನನ್ನಾಗಿ ಮಿಥುನ್ ರೈ ಯನ್ನು ತಾನು ಈ ಕ್ಷೇತ್ರದ ಅಭ್ಯರ್ಥಿತನಕ್ಕೆ ಘೋಷಿಸಿರುವುದಾಗಿ ತಿಳಿಸಿದರು.
ದಕ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ಮಕ್ಕಳಿಗೆ ಧರ್ಮದ ಮೌಲ್ಯವನ್ನು ಹೇಳಿಕೊಡಿ, ಸಿದ್ದಾಂತ ಬೇಡ. ಧರ್ಮ ಮುಂದುವರಿಸಲು ಯಾವುದೇ ಸಂಘಟನೆ ಅವಶ್ಯವಲ್ಲ. ಎಲ್ಲ ಧರ್ಮಗಳಲ್ಲೂ ಹಸಿವು ಇದೆ. ಈ ಹಸಿವನ್ನು ನೀಗಿಸುವ ಕೆಲಸ ನಡೆಯಲಿ ಎಂದರು. ಅಂಗನವಾಡಿ ಕಾರ್ಯಕರ್ತೆ ಉಷಾ ಎನ್ ರಾಜ್ ಮಾತನಾಡಿ ಸರಕಾರದ ಎಲ್ಲಾ ಕೆಲಸಗಳನ್ನು ನಾವು ಮಾಡಿಕೊಡುತ್ತೇವೆ. ಆದರೆ ನಮ್ಮ ಹೋರಾಟಗಳಿಗೆ ಸರಕಾರ ಗಮನಿಸುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸುಪ್ರಿಯಾ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಶ್, ಪ್ರಚಾರ ಸಮಿತಿ ಅಧ್ಯಕ್ಷ ಕುಮಾರ್ ಪೂಜಾರಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ, ನಗರ ಅಧ್ಯಕ್ಷ ಜೊಸ್ಸಿ ಮಿನೆಜಸ್, ಪುರಸಭಾ ಮಾಜಿ ಸದಸ್ಯ ಪಿಕೆ ತೋಮಸ್, ಸಿಡಿಪಿಓ ಶೈಲಜಾ, ಆಶಾ ಕಾರ್ಯಕರ್ತೆ ಶೋಭಾ ವೇದಿಕೆಯಲ್ಲಿದ್ದರು. ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಆಶಾ ಕಾರ್ಯಕರ್ತರಿಂದ ಸಂಗೀತ ಸಮೂಹ ನೃತ್ಯ ಕಾರ್ಯಕ್ರಮ ಜರುಗಿತು.
