ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್ಕೆಪಿಎ) ಮೂಡುಬಿದಿರೆ ವಲಯದ ಆಶ್ರಯದಲ್ಲಿ ವಲಯದ ಸದಸ್ಯರಿಗಾಗಿ ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಶ್ರೀಕಾಂತ್ ತಿಲಕ್ ಅವರಿಂದ ಸ್ಟುಡಿಯೋ ಲೈಟಿಂಗ್ಸ್ ಕುರಿತಾದ ವಿಶೇಷ ತಾಂತ್ರಿಕ ಕಾರ್ಯಾಗಾರವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರುಗಿತು.
ಈ ಕಾರ್ಯಾಗಾರವನ್ನು ನಡೆಸಿ ಕೊಟ್ಟ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ತಿಲಕ್ ಅವರು ಛಾಯಾಗ್ರಹಣದ ಮೂಲಭೂತ ತತ್ವಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. “ಛಾಯಾಗ್ರಹಣ ಎಂದರೆ ಕೇವಲ ಕ್ಯಾಮೆರಾ ಕ್ಲಿಕ್ ಮಾಡುವುದಲ್ಲ, ಅದು ನೆರಳು ಮತ್ತು ಬೆಳಕಿನ ಸುಂದರ ಆಟ. ಲೈಟಿಂಗ್ಸ್ ಅನ್ನು ಸಮರ್ಪಕವಾಗಿ ಮತ್ತು ಸೃಜನಶೀಲವಾಗಿ ಉಪಯೋಗಿಸಿಕೊಂಡು ಯಾವ ರೀತಿಯಲ್ಲಿ ವಿಭಿನ್ನವಾಗಿ ಫೋಟೋಗಳನ್ನು ಸೆರೆಹಿಡಿಯಬಹುದು ಹಾಗೂ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಕರ್ಷಕ ಚಿತ್ರಗಳನ್ನು ನೀಡಬಹುದು” ಎಂಬುದರ ಕುರಿತು ಅವರು ವಿಸ್ತೃತವಾದ ತರಬೇತಿ ಹಾಗೂ ತಾಂತ್ರಿಕ ಸಲಹೆಗಳನ್ನು ನೀಡಿದರು.
ವಲಯದ ಅಧ್ಯಕ್ಷ ನಿತಿನ್ ಬೆಳುವಾಯಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಖ್ಯಾತ ಛಾಯಾಗ್ರಾಹಕ ಶ್ರೀಕಾಂತ್ ತಿಲಕ್ ಅವರನ್ನು ಗೌರವಿಸಿದರು.
ವೇದಿಕೆಯಲ್ಲಿ ವಲಯದ ಪ್ರಧಾನ ಕಾರ್ಯದರ್ಶಿ ನಮಿತ್ ಬಂಗೇರಾ, ಛಾಯಾ ಕಾರ್ಯದರ್ಶಿ ಸತೀಶ್ ಎಂ., ವಲಯದ ಉಪಾಧ್ಯಕ್ಷ ರಂಜಿತ್ ಕೋಟ್ಯಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಕೋಟ್ಯಾನ್ ಹಾಗೂ ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಮೂಡುಬಿದಿರೆ ವಲಯದ ಉತ್ಸಾಹಿ ಛಾಯಾಗ್ರಾಹಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು. ವಲಯದ ಪ್ರಧಾನ ಕಾರ್ಯದರ್ಶಿ ನಮಿತ್ ಬಂಗೇರಾ ವಂದಿಸಿದರು.
