“ಗಾಂಧೀಜಿಯವರು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಂತವರು. ಬಾಲ್ಯದಿಂದಲೂ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪಾಲಿಸುವುದರ ಜೊತೆಗೆ, ತಾನುತೆಗೆದುಕೊಂಡ ಪ್ರತಿಜ್ಞೆಗಳನ್ನು ಜೀವನದುದ್ದಕ್ಕೂ ಪಾಲಿಸಿ ಸರಳತೆಯಿಂದ ಜೀವನ ನಡೆಸಿದರು. ರಾಷ್ಟ್ರಪಿತ, ಮಹಾತ್ಮಾ ಮೊದಲಾದ ಹೆಸರುಗಳಿಂದ ಗುರುತಿಸಿಕೊಂಡ ಗಾಂಧೀಜಿ ವಿಶ್ವವಂದ್ಯರಾಗಿ ಸಾರ್ಥಕಜೀವನವನ್ನು ನಡೆಸಿದರು. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಜೀವನವನ್ನು ನಡೆಸಿದ ಅವರ ಬದುಕಿನಲ್ಲಿ ನಡೆದ ಘಟನೆಗಳೆಲ್ಲವೂ ಅತ್ಯದ್ಭುತ. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣ-ದ್ವೇಷ ಘರ್ಷಣೆ ಯನ್ನು ತೊಡಗಿಸಲು ಅವರು ನಡೆಸಿದ ಹೋರಾಟ ಹಾಗೂ ಸತ್ಯ ಮತ್ತು ಅಹಿಂಸೆಯ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅವರ ಜೀವನವೇ ನಮಗೆ ಸಂದೇಶ ಹಾಗೂ ಆದರ್ಶ. ತಮ್ಮೆರಡೂ ಕೈಗಳಲ್ಲೂ ಬರೆಯಬಲ್ಲ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದ ಗಾಂಧೀಜಿಯವರು ಅದ್ಭುತ ಬರಹಗಾರರೂ ಹೌದು. ಅವರ ವ್ಯಕ್ತಿತ್ವದಿಂದ, ನಾವು ಕಲಿಯುವುದು ಬಹಳಷ್ಟಿದೆ. ಆದರೆ ಇಂದಿನ ಯುವಜನತೆಯಿಂದ ಗಾಂಧೀಯವರು ದೂರವಾಗುತ್ತಿರುವುದು ದುರಂತದ ವಿಚಾರ. ಒಬ್ಬ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ಭಾರತೀಯರಾಗಿ, ಗಾಂಧೀಜಿಯವರನ್ನುಕೃತಜ್ಞತಾಪೂರ್ವಕವಾಗಿ ಸದಾ ನೆನಪಿಸುವುದರ ಮೂಲಕ ದೇಶಕ್ಕೆಗೌರವವನ್ನು ಸಲ್ಲಿಸಬೇಕು” ಎಂಬುದಾಗಿ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ತಿಳಿಸಿದರು.
ಅವರು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ‘ಗಾಂಧೀಜಯಂತಿ’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಾಂಧೀಜಿಯವರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಮಾತನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹಾಗೂ ಐಕ್ಯೂಎಸಿ ಸಂಚಾಲಕ ಪ್ರೊ. ಹರೀಶ್, ರೆಡ್‌ಕ್ರಾಸ್ ಅಧಿಕಾರಿಗಳಾದ ಶ್ರೀಗೌರಿ, ಎನ್‌ಎಸ್‌ಎಸ್ ಅಧಿಕಾರಿ ಶಾರದಾ, ರೇಂಜರ್ಸ್ ಅಧಿಕಾರಿ ಶ್ರಧ್ದಾ, ರೋವರ್ಸ್ ಅಧಿಕಾರಿ ಸಂದೀಪ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲಿಗೆ ನಡೆದ ‘ಗಾಂಧೀ ಸ್ಮೃತಿ’ ಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧೀಜಿಯವರಿಗೆ ಪ್ರಿಯವಾದ ಭಜನೆಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಗಾಂಧೀ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಸಂಜನಾ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಗಾಂಧೀಜಯಂತಿಯ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಗಾಂಧೀ ಸಾಹಿತ್ಯ ಕುರಿತಾದ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.