ಕಳೆದೆರಡು ವರ್ಷಗಳಿಂದ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆಯ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳನ್ನು ಕೆಡವಲಾಗಿದ್ದು, ದಿನಂಪ್ರತಿ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಇನ್ನಿತರ ಪ್ರಯಾಣಿಕರು ರಸ್ತೆ ಬದಿಯಲ್ಲಿಯೇ ಬಿಸಿಲು ಮಳೆಗೆ ಬಸ್ಸಿಗಾಗಿ ಕಾಯಬೇಕಾಗಿದ್ದು, ಕಳೆದ ಎರಡು ವರ್ಷಗಳಿಂದ ತೀರಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ, ಜಿಲ್ಲಾಧಿಕಾರಿಯವರಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೊಸ ತಂಗುದಾಣಕ್ಕೆ ಸ್ಥಳ ನಿಗದಿಪಡಿಸಿಲ್ಲ :
ಹೊಸ ತಂಗುಧಾನ ನಿರ್ಮಾಣ ಆಗುವವರೆಗೆ ಕನಿಷ್ಠ ಪಕ್ಷ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿಯೂ ಕೂಡ ಯಾವುದೇ ಅನುಕೂಲಗಳನ್ನು ಒದಗಿಸಿಲ್ಲ.
ಹೊಸ ಪ್ರಯಾಣಿಕರ ತಂಬುದಾಣಗಳನ್ನು ನಿರ್ಮಾಣ ಮಾಡಲು ಇನ್ನೂ ಕೂಡ ಸ್ಥಳ ನಿಗದಿ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೀನ ಮೇಷ ಎಣಿಸುತ್ತಿದ್ದು, ತೀರಾ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ.
ಸಾಣೂರು ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ : ಹೆದ್ದಾರಿ ಇಲಾಖೆಯ ಜನ ವಿರೋಧಿ ನೀತಿಯಿಂದ ಬೇಸತ್ತು ಸ್ಥಳೀಯ ರಿಕ್ಷಾ ಮಾಲಕ ಚಾಲಕರು, ಸಾಣೂರು ಯುವಕ ಮಂಡಲದ ಸಹಭಾಗಿತ್ವದೊಂದಿಗೆ ಬಿಸಿಲಿನ ಬೇಗೆಯಿಂದ ಹೆದ್ದಾರಿ ಬದಿಯಲ್ಲಿ ನಿಲ್ಲಲು ನೆರಳು ಬಲೆ ಮತ್ತು ಮರದ ಕಂಬಗಳಿಂದ ಸಾಣೂರಿನಲ್ಲಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದುದರಿಂದ, ಹೆದ್ದಾರಿ ಕಾಮಗಾರಿಗೆ ತಡೆಯುಂಟಾಗಿತ್ತು. ಇದೀಗ ನಾಲ್ಕು ತಿಂಗಳ ಬಳಿಕ ಕಳೆದ ಒಂದು ವಾರದಿಂದ ಗುತ್ತಿಗೆದಾರ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಹೆದ್ದಾರಿ ಕಾಮಗಾರಿಯನ್ನು ಆರಂಭಿಸಿರುತ್ತಾರೆ.
ಆದಷ್ಟು ಶೀಘ್ರವಾಗಿ ನೆನೆಗುದಿಗೆ ಬಿದ್ದಿರುವ ತಡೆಗೋಡೆ ನಿರ್ಮಾಣ ಕಾಮಗಾರಿ, ಹೊಸ ಪ್ರಯಾಣಿಕರ ತಂಗು ದಾಣಗಳ ನಿರ್ಮಾಣ ಕಾರ್ಯ, ಬಾಕಿ ಉಳಿದಿರುವ ಸರ್ವಿಸ್ ರಸ್ತೆಗಳ ಕಾಮಗಾರಿ, ಬೀದಿ ದೀಪಗಳ ಅಳವಡಿಕೆ, ಸೂಕ್ತ ಚರಂಡಿ ನಿರ್ಮಾಣ, ಗ್ರಾಮದ ಹೆದ್ದಾರಿ ಅಡ್ಡರಸ್ತೆಗಳಿಗೆ ಡಾಮರೀಕರಣ ಮೊದಲಾದ ಅಗತ್ಯದ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಒತ್ತಾಯಿಸಿರುತ್ತಾರೆ.