ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯವರನ್ನು (44) ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿಲೀಪ್ ಹೆಗ್ಡೆ ಯವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಬಾಲಕೃಷ್ಣ ಪೂಜಾರಿಯ ಕುಟುಂಬಿಕರು ಪತ್ರಿಕಾಗೋಷ್ಠಿಯ ಮೂಲಕ ಒತ್ತಾಯಿಸಿದರು.
ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಸಹಿತ ಬಾಲಕೃಷ್ಣ ಪೂಜಾರಿಯ ಕುಟುಂಬಿಕರು ಇಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮೃತರ ಸಂಬಂಧಿ ಸಹೋದರ ಪ್ರಕಾಶ್ ಪೂಜಾರಿ ಮಾತನಾಡಿ ಆರೋಪಿ ಪ್ರತಿಮಾಳಿಗೆ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಗೆ ಜೀವಾವಧಿ ಶಿಕ್ಷೆಯಾಗಬೇಕು, ದಿಲೀಪ್ ಹೆಗ್ಡೆಯನ್ನು ಹಣ ಬಲದಲ್ಲಿ ಬಚಾವ್ ಮಾಡಲು ಆತನ ತಂದೆ ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ, ಆದ್ದರಿಂದ ತನಿಖೆಯನ್ನು ಚುರುಕುಗೊಳಿಸುವಂತೆ ಕೂಡಲೇ ಎಸ್‌ಪಿಯವರಿಗೆ ಮನವಿಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ, ತನ್ನ ತಂಗಿ ಮಾಡಿದ ಘೋರ ಅಪರಾಧಕ್ಕೆ ಆಕೆ ತಕ್ಕ ಶಿಕ್ಷೆ ಅನುಭವಿಸಲೇಬೇಕು ಎಂದರು.
ಬಾಲಕೃಷ್ಣ ಪೂಜಾರಿಯ ತಂದೆ ಸಂಜೀವ ಪೂಜಾರಿ, ತಾಯಿ ಲೀಲಾ, ಸಹೋದರಿ ಶಶಿ, ಚಿಕ್ಕಮ್ಮ ವನಜ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.